ರಾಜಕೀಯ

ಕರ್ನಾಟಕ ಸರ್ಕಾರ ವಲಸೆ ಕಾರ್ಮಿಕರನ್ನು ಜೀತದಾಳುಗಳಿಗಿಂತ ಕೆಟ್ಟದಾಗಿ ನಡೆಸಿಕೊಂಡಿದೆ: ಯೆಚೂರಿ

Shilpa D

ನವದೆಹಲಿ: ಕರ್ನಾಟಕ ಬಿಜೆಪಿ ಸರ್ಕಾರ ವಲಸೆ ಕಾರ್ಮಿಕರನ್ನು ಜೀತದಾಳುಗಳಿಗಿಂತ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಬಂದು ಇಲ್ಲೆ ನೆಲೆಸಿರುವ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ತಮ್ಮ ಸ್ವಂತ ಸ್ಥಳಗಳಿಗೆ ಹೋಗದಂತೆ ರಾಜ್ಯ ಸರ್ಕಾರ ಸೂಚಿಸಿದ್ದ ನಿರ್ಧಾರವನ್ನು .ಯೆಚೂರಿ ಖಂಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗದಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಲ್ಡರ್ ಮತ್ತು ಗುತ್ತಿಗೆದಾರರ ಜೊತೆ ಮಂಗಳವಾರ ಸಂಜೆ ಸಭೆ ನಡೆಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಿಲ್ಡರ್‌ಗಳು  ನಿರ್ಮಾಣ ಚಟುವಟಿಕೆಗಳನ್ನು ಪುನಃ ಆರಂಭಿಸಲು ನಮಗೆ ಕಾರ್ಮಿಕರು ಬೇಕು ಎಂದು ಬೇಡಿಕೆ ಇಟ್ಟಿದ್ದರು. 

ಬಿಜೆಪಿ ಸರ್ಕಾರ ಜೀತದಾಳುಗಳಿಗಿಂತ  ಕೆಟ್ಟ ರೀತಿಯಲ್ಲಿ  ವಲಸೆ ಕಾರ್ಮಿಕರನ್ನು ನೋಡಿಕೊಳ್ಳುತ್ತಿದೆ. ದೇಶದಲ್ಲಿ ಕಾನೂನು ಇಲ್ಲವೇ, ಬಿಜೆಪಿ ಸರ್ಕಾರ ಮಧ್ಯಕಾಲೀನ ಅನಾಗರಿಕತೆ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳಿಸಲು ಕರ್ನಾಟಕ ಸರ್ಕಾರ ರೈಲುಗಳಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ, ಈಗ ರೈಲುಗಳ ಅವಶ್ಯಕತೆ ಇಲ್ಲ ಎಂದು ಇಲಾಖೆಗೆ ಪತ್ರ ಬರೆದಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ  ಎನ್. ಮಂಜುನಾಥ್ ಪ್ರಸಾದ್ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯದ ಜನರಲ್ ಮ್ಯಾನೇಜರ್‌ಗೆ ಈ ಕುರಿತು ಪತ್ರ ಬರೆದಿದ್ದಾರೆ. 

ಈ ಹಿಂದೆ ಕಾರ್ಮಿಕರ ರವಾನೆಗಾಗಿ ರೈಲ್ವೇ ಇಲಾಖೆಗೆ ಮನವಿ ಮಾಡಿದ್ದ ಸರ್ಕಾರ ರೈಲುಗಳ ನಿಯೋಜಿಸುವಂತೆ ಕೇಳಿತ್ತು. ದಿನಕ್ಕೆ 2 ರೈಲುಗಳಂತೆ 5 ದಿನಗಳ ಕಾಲ ಹತ್ತು ರೈಲುಗಳನ್ನು ಓಡಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ  ಬುಧವಾರದಿಂದ ನಮಗೆ ರೈಲುಗಳು ಬೇಡ. ನಮ್ಮ ವಿನಂತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಮಂಗಳವಾರ ಪತ್ರ ಬರೆಯಲಾಗಿದೆ.

SCROLL FOR NEXT