ರಾಜಕೀಯ

ಬಾಬ್ರಿ ಮಸೀದಿ ಧ್ವಂಸ ಮಾಡಿದ್ದ ವಿಡಿಯೊ ಸಾಕ್ಷಿಗಳಿದ್ದರೂ ಆರೋಪಿಗಳು ಖುಲಾಸೆಗೊಂಡರು: ಹೆಚ್ ಡಿ ದೇವೇಗೌಡ

Sumana Upadhyaya

ಬೆಂಗಳೂರು: ರಾಜ ರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಾಯಂಕಾಲ ತೆರೆ ಬೀಳಲಿದೆ. ಈ ಬಾರಿ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ವತಃ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರೇ ಪ್ರಚಾರ ನಡೆಸಿದ್ದಾರೆ.

ಪ್ರಚಾರದ ವೇಳೆ ದೇವೇಗೌಡರು ಬಾಬ್ರಿ ಮಸೀದಿ ವಿಷಯವನ್ನು ಕೂಡ ತಂದಿದ್ದಾರೆ. ನಿನ್ನೆ ಇಲ್ಲಿ ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಾ, ಅಲಹಾಬಾದ್ ಹೈಕೋರ್ಟ್ ನ ತೀರ್ಪನ್ನು ಟೀಕಿಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳೆಲ್ಲರೂ ಕೇಸಿನಿಂದ ಖುಲಾಸೆಗೊಂಡಿದ್ದನ್ನು ದೇವೇಗೌಡರು ಪ್ರಶ್ನಿಸಿದ್ದಾರೆ.

1 ಲಕ್ಷಕ್ಕೂ ಅಧಿಕ ಜನರ ಮುಂದೆ ಮಸೀದಿಯನ್ನು ಕೆಡವಿದ್ದಾಗ, ಈ ಬಗ್ಗೆ ವಿಡಿಯೊ ಸಾಕ್ಷಿಗಳೇ ಇದ್ದರೂ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಇದು ದೇಶದ ಪರಿಸ್ಥಿತಿ ಎಂದರು. ಇದಕ್ಕೆ  ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಕಾರಣ ಎಂದು ಆರೋಪಿಸಿದ ದೇವೇಗೌಡರು ರಾಜೀವ್ ಗಾಂಧಿ ಸರ್ಕಾರದಲ್ಲಿ ಬೂಟಾ ಸಿಂಗ್ ಅವರು ಗೃಹ ಸಚಿವರಾಗಿದ್ದಾಗ ಮಸೀದಿಯ ಬಾಗಿಲು ತೆರೆದರು, 1992ರ ಡಿಸೆಂಬರ್ 6ರಂದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಾಬ್ರಿ ಮಸೀದಿಯನ್ನು ಕೆಡವಿದ್ದರು ಎಂದು ಆರೋಪಿಸಿದರು.


ನಿನ್ನೆಯ ಪ್ರಚಾರ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿಯನ್ನು ಟೀಕಿಸಿ ಗುಜರಾತ್ ಗೋಧ್ರಾ ಹತ್ಯಾಕಾಂಡದಲ್ಲಿ ಬಲಿಯಾಗಿದ್ದವರ ಕುಟುಂಬಗಳನ್ನು ತಾಯಿ-ಮಗ ಭೇಟಿ ಮಾಡಲಿಲ್ಲ. ನಾನು ಹೋಗಿ ಭೇಟಿ ಮಾಡಿ ಜನರಿಗೆ ಸಾಂತ್ವನ ಹೇಳಿದ್ದೆ. ಕಾಶ್ಮೀರಕ್ಕೆ ಕೂಡ ನಾನು ಹೋಗಿ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೆ ಎಂದಿದ್ದಾರೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಟೀಕಿಸಿದ ದೇವೇಗೌಡ, ಅಕ್ರಮವಾಗಿ ಮತದಾರರಿಗೆ ಹಣ ಹಂಚಿದ್ದಾರೆ ಎಂದು ಆರೋಪಿಸಿದರು. ನಮ್ಮ ವಿರೋಧ ಪಕ್ಷ ಚುನಾವಣೆ ಸಂದರ್ಭದಲ್ಲಿ 20 ಕೋಟಿ ಖರ್ಚು ಮಾಡಬಹುದು. ಆದರೆ ನಮಗೆ ಸಾಧ್ಯವಿಲ್ಲ. ಇಂದಿನ ಯುವಕರು ನಿಮ್ಮ ಸಮುದಾಯಕ್ಕೆ ನಾನು ಎಷ್ಟು, ಏನು ಕೊಡುಗೆಗಳನ್ನು ನೀಡಿದ್ದೇನೆ ಎಂದು ನೋಡಬೇಕು ಎಂದರು.

ಶಿರಾ ಚುನಾವಣೆಯೇ ನನಗೆ ಕೊನೆಯಾಗಬಹುದು, ನನಗೆ ಈಗಾಗಲೇ 88 ವರ್ಷ ಸದ್ಯದಲ್ಲಿಯೇ ರಾಜಕೀಯದಿಂದ ನಿವೃತ್ತಿ ಹೇಳಬಹುದು. ಕಳೆದ ತುಮಕೂರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆದ ಮಂಡಿನೋವು ಇನ್ನೂ ನನ್ನನ್ನು ಬಾಧಿಸುತ್ತಿದೆ. ನನ್ನ ರಾಜ್ಯಸಭಾ ಸದಸ್ಯ ಅನುದಾನದಿಂದ ಶಿರಾ ಕ್ಷೇತ್ರವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುವುದಾಗಿ ಇದೇ ಸಂದರ್ಭದಲ್ಲಿ ದೇವೇಗೌಡ ಹೇಳಿದರು.

SCROLL FOR NEXT