ಬೆಂಗಳೂರು: ಸರ್ಕಾರಿ ನೌಕರರು ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂಬ ಸರ್ಕಾರದ ನೀತಿ, ಫ್ಯಾಸಿಸ್ಟ್ ನಡೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ತನ್ನ ನೌಕರರನ್ನು ಗುಲಾಮರು, ಸ್ವತಂತ್ರ ವ್ಯಕ್ತಿತ್ವವಿಲ್ಲದ ರೋಬೋಟುಗಳು ಎಂದು ಭಾವಿಸಿದೆ. ಸರ್ಕಾರಿ ನೌಕರರು, ಅವರ ಕುಟುಂಬದವರು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ನಿಯಮಗಳನ್ನು ತರಲು ಹೊರಟಿರುವುದು ಸಂಪೂರ್ಣ ಮಾನವ ವಿರೋಧಿಯಾದ ಫ್ಯಾಸಿಸ್ಟ್ ರೀತಿಯ ನಡಳಿಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಅಕ್ಟೋಬರ್ 27ರಂದು ಕರ್ನಾಟಕ ಸೇವಾ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ಕ್ಕೆ ನಡತೆ-ನಿಯಮಗಳನ್ನು ತರಲು ಉದ್ದೇಶಿಸಿ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯನ್ನು ಸಂಪೂರ್ಣವಾಗಿ ಗಮನಿಸಿದಾಗ, (1) ನಿಯಮ 10 ರಲ್ಲಿನ ಉಪನಿಯಮಗಳು ಒಂದಕ್ಕೊಂದು ಸಂಪೂರ್ಣವಾಗಿ ವಿರೋಧಾಭಾಸಗಳಿಂದ ಕೂಡಿವೆ. ಒಂದು ಕಡೆ, ಏನೇ ಚಟುವಟಿಕೆಗಳನ್ನು ನಡೆಸಬೇಕೆಂದರೂ, ಏನೇ ಬರೆಯಬೇಕೆಂದರೂ, ಏನೇ ಮಾತನಾಡ ಬೇಕೆಂದರೂ, ಪ್ರಕಟಿಸಬೇಕೆಂದರೂ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಹೇಳಲಾಗುತ್ತದೆ. ಅದೇ ಅಧಿನಿಯಮದ ಇನ್ನೊಂದು ಉಪನಿಯಮದಲ್ಲಿ ಇದಕ್ಕೆ ಸಂಪೂರ್ಣ ವಿರುದ್ಧವಾದ ನಿಲುವು ಇದೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಜ್ಞಾನ-ವಿಜ್ಞಾನ ದ್ವೇಷಿಯಾದ ವಾತಾವರಣ ನಿಧಾನವಾಗಿ ವ್ಯಾಪಿಸುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿ ನಡೆಯಬೇಕಾದಷ್ಟು ಪ್ರಮಾಣದಲ್ಲಿ ಸಂಶೋಧನೆ, ಅಧ್ಯಯನಗಳು ನಡೆಯುತ್ತಿಲ್ಲ. ಗುಣಮಟ್ಟದ ಪ್ರಕಟಣೆ ಆಗುತ್ತಿಲ್ಲ. ಕಾಲೇಜುಗಳಲ್ಲೂ ಇದೇ ರೀತಿಯ ವಾತಾವರಣವಿದೆ. ನಮ್ಮಲ್ಲಿ ಸಮಾಜ ವಿಜ್ಞಾನ, ಸಾಹಿತ್ಯ, ವಿಜ್ಞಾನ, ರಾಜಕೀಯ, ಆರ್ಥಿಕತೆ, ಪರಿಸರ ಮುಂತಾದ ವಿಚಾರಗಳಲ್ಲಿ ಅತ್ಯಂತ ಕಳಪೆ ಎನ್ನುವ ಕೆಲಸಗಳು ನಡೆಯುತ್ತಿವೆ ಎಂಬ ಜಾಗತಿಕ ಮಟ್ಟದ ವರದಿ/ಸಮೀಕ್ಷೆಗಳು ಪ್ರಕಟವಾಗುತ್ತಿವೆ.
ಜ್ಞಾನ ವಿಜ್ಞಾನ ಕ್ಷೇತ್ರಗಳಲ್ಲಿ ಅವನತಿಗೊಂಡ ಸಮಾಜವು ಯಾವ ರೀತಿಯಲ್ಲೂ ಏಳಿಗೆ ಆಗಲು ಸಾಧ್ಯವಿಲ್ಲ. ಪ್ರಪಂಚದ ನೂರು ವಿಜ್ಞಾನ ನಗರಗಳಲ್ಲಿ ಬೆಂಗಳೂರು 95 ನೇ ಸ್ಥಾನದಲ್ಲಿದೆ ಎಂಬುದು ನಮಗೆಲ್ಲಾ ನಾಚಿಕೆ ತರಿಸುವ ಸಂಗತಿಯಾಗಿದೆ. ನೌಕರರು, ಉಪನ್ಯಾಸಕರು, ಪ್ರಾಧ್ಯಾಪಕರುಗಳು ತಮ್ಮ ಉದ್ಯೋಗವನ್ನು ನಿಷ್ಠೆಯಿಂದ ಮಾಡುವುದರ ಜತೆಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗದಂತೆ ಮುಕ್ತವಾಗಿ ಜ್ಞಾನ ವಿಜ್ಞಾನಗಳ ಬೆಳವಣಿಗೆಗೆ ಸರಕಾರವು ಅದಕ್ಕೆ ಪೂರಕವಾಗಿ ಕೆಲಸ ಮಾಡಲು ಅಗತ್ಯವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.