ರಾಜಕೀಯ

ಎರಡು ಬಾರಿ ಸಂಸದರಾಗಿರುವವರು ಪೇಟೆ ರೌಡಿಯಂತೆ ಮಾತನಾಡಬಾರದು: ಪ್ರತಾಪ್ ಸಿಂಹಗೆ ಸುಮಲತಾ ತಿರುಗೇಟು

Shilpa D

ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಪೇಟೆ ರೌಡಿಯಂತೆ ಮಾತನಾಡಬಾರದು ಎಂದು ಸಂಸದೆ ಸುಮಲತಾ ಹೇಳಿದ್ದಾರೆ. 

ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಪಟ್ಟಂತೆ ಸುಮಲತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಭೇಟಿ ವೇಳೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ‌ ನೀಡಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ತಿರುಗೇಟು ನೀಡಿದ್ದಾರೆ.

ಪ್ರತಾಪ್‌ ಸಿಂಹ ಅವರನ್ನು ಪೇಟೆ ರೌಡಿಗೆ ಹೋಲಿಕೆ ಮಾಡಿ ಸುಮಲತಾ ಅವರು ಮಾತನಾಡಿದ್ದಾರೆ. ಸಿಎಂ ನಿವಾಸ ಕಾವೇರಿ ಬಳಿ ಸುಮಲತಾ ಅಂಬರೀಶ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಾಪ್‌ಸಿಂಹ ಅವರು ನಮ್ಮ ಕ್ಷೇತ್ರದ ಪಕ್ಕದ ಕ್ಷೇತ್ರದ ಸಂಸದರು. ಅವರು ಎರಡು ಬಾರಿ ಸಂಸದರಾಗಿದ್ದಾರೆ. ಅದನ್ನು ಅರಿತು ಮಾತನಾಡಬೇಕಾಗುತ್ತದೆ. ಪೇಟೆ ರೌಡಿಯ ತರಹ ಅವರು ಮಾತನಾಡಬಾರದು ಎಂದು ತಿರುಗೇಟು ನೀಡಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂದು ನನಗೂ ಗೊತ್ತಿದೆ. ಕೊಡಗು ಭಾಗಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವುದರ ಬಗ್ಗೆ ನಮಗೂ ದೂರುಗಳು ಬಂದಿವೆ. ಅಂಬರೀಶ್ ಇದ್ದಾಗ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ. ಅಂಬರೀಶ್ ಇದ್ದಾಗ ಇಂತಹ ಮಾತುಗಳನ್ನು ಯಾರೂ ಆಡುತ್ತಿರಲಿಲ್ಲ. ಇಂದು‌ ಅಂಬರೀಶ್ ಇಲ್ಲ. ಹೀಗಾಗಿ, ಅವರೆಲ್ಲಾ ಮಾತನ್ನಾಡುತ್ತಿದ್ದಾರೆ ಎಂದು ಸುಮಲತಾ ಹೇಳಿಕೆ ನೀಡಿದ್ದಾರೆ.

ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರನ್ನು ಸೋಲಿಸಲು ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ ಅಷ್ಟೇ. ಬೆಂಗಳೂರು-ಮೈಸೂರು ಹತ್ತು ಪಥಗಳ ರಸ್ತೆ ಕಾಮಗಾರಿಯ ಬಗ್ಗೆ ಅಧಿಕಾರಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡುವಾಗ ಪ್ರತಾಪ್ ಸಿಂಹ ಹೀಗೆ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿತ್ತು.

SCROLL FOR NEXT