ರಾಜಕೀಯ

2018 ರಲ್ಲಿ ಸಿಎಂ ಆಗುವಂತೆ ನರೇಂದ್ರ ಮೋದಿಯೇ ನನಗೆ ಆಫರ್ ನೀಡಿದ್ದರು: ಎಚ್ ಡಿಕೆ ಬಾಂಬ್!

Shilpa D

ತುಮಕೂರು: 2018 ರ ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಯವರು ನನ್ನನ್ನು ಸಿಎಂ ಮಾಡಲು ಮುಂದಾಗಿದ್ದರು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಶಿರಾದಲ್ಲಿ ಬುಧವಾರ ನಡೆದ ಜೆಡಿಎಸ್​ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಕೇಂದ್ರದಿಂದ ನರೇಂದ್ರ ಮೋದಿ ಅವರೇ ಆಫರ್ ಮಾಡಿದ್ದರು. ಐದು ವರ್ಷ ನಿನ್ನನ್ನು ಯಾರೂ ನಿಮಗೆ ತೊಂದರೆ ಕೊಡೊಲ್ಲ ಎಂದಿದ್ದರು ಎಂದು ಹೇಳಿದ್ದಾರೆ.

ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯದಿಂದ ನಿರ್ಗಮಿಸಬೇಕು ಎಂದುಕೊಂಡೆ. ಆದರೆ ಕಾಂಗ್ರೆಸ್​ನವರು ತರಾತುರಿಯಲ್ಲಿ ದೇವೇಗೌಡರಿಗೆ ಫೋನ್ ಮಾಡಿ ಕರೆದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವಂತೆ ದೇವೇಗೌಡರು ಒತ್ತಾಯ ಮಾಡಿದ್ದರು, ಎಷ್ಟೇ ಹೇಳಿದರೂ ಕೇಳದೆ ನನಗೆ ಕಾಂಗ್ರೆಸ್​ನವರು ಮುಖ್ಯಮಂತ್ರಿ ಪಟ್ಟ ಕಟ್ಟಿದ್ರು. ನನಗೆ ಸಿಎಂ ಆಗುವ ಆಸೆ ಇರಲಿಲ್ಲ' ಎಂದು ಎಚ್​ಡಿಕೆ ಹೇಳಿದರು.

ಮುಖ್ಯಮಂತ್ರಿಯಾದರೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬಹುದು, ಅವರ ಆಶೋತ್ತರಗಳನ್ನು ಈಡೇರಿಸಬಹುದು ಎಂಬ ಕಾರಣದಿಂದ ನಾನು ಸಿಎಂ ಪದವಿಗೆ ಒಪ್ಪಿಕೊಂಡೆ, ಆದರೆ ಸಂಕುಚಿತ ಮನಸ್ಸಿನ ನಾಯಕರುಗಳಿಂದಾಗಿ ನಾನು ಸರಿಯಾಗಿ ಸರ್ಕಾರ ನಡೆಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಯಡಿಯೂರಪ್ಪ ಸರ್ಕಾರ ಹಲವು ಜನಪರ ಯೋಜನೆಗಳನ್ನು ಕೈಬಿಟ್ಟರು ಎಂದು ಆರೋಪಿಸಿದ ಕುಮಾರಸ್ವಾಮಿ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಹರಿಹಾಯ್ದರು, ಹಣದ ಆಮೀಷಕ್ಕೆ ಬಲಿಯಾಗದಂತೆ ಮತದಾರರಿಗೆ ಮನವಿ ಮಾಡಿದರು. ಇನ್ನೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಕೂಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

SCROLL FOR NEXT