ರಾಜಕೀಯ

ರಾಜರಾಜೇಶ್ವರಿನಗರ ಉಪ ಚುನಾವಣೆ: 'ಡಿಕೆ ಬ್ರದರ್ಸ್' ಪವರ್ ನಿಂದ 'ಕೈ' ಅಭ್ಯರ್ಥಿ ಗೆಲುವಿನ ವಿಶ್ವಾಸ

Shilpa D

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಕಾಂಗ್ರೆಸ್ ನಿಂದ ದಿವಂಗತ ಐಎಎಸ್ ಅಧಿಕಾರಿ ಪತ್ನಿ ಎಚ್.ಕುಸುಮಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. 

ಆಡಳಿತಾರೂಡ ಬಿಜೆಪಿ ಇನ್ನೂ ಆರ್ ಆರ್ ನಗರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ, ಇನ್ನೂ ಶಿರಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಬಿ ಜಯಚಂದ್ರ ಅವರನ್ನುಕಣಕ್ಕಿಳಿಸಿದೆ. 

ಆರ್ ಆರ್ ನಗರದಲ್ಲಿ ಹೊಸಬರನ್ನು ಕಣಕ್ಕಿಳಿಸಿ ಕಾಂಗ್ರೆಸ್ ತಪ್ಪು ಮಾಡಿತೇ ಎಂದು ಕೆಲವರು ಮಾತನಾಡುತ್ತಿದ್ದಾರೆ, ಆದರೆ ನಿಜವಾದ ಪವರ್ ಹೌಸ್ ಡಿಕೆ ಬ್ರದರ್ಸ್ ಇರುವಾಗ ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ 2013 ಮತ್ತು 2018 ರಲ್ಲಿ ಮುನಿರತ್ನ ಕಾಂಗ್ರೆಸ್ ನಿಂದ ಗೆಲುವು ಸಾಧಿಸಲು ಡಿಕೆ ಶಿವಕುಮಾರ್ ಮತ್ತು ಸುರೇಶ್ ಕಾರಣರಾಗಿದ್ದರು.

ಅದಾದ ನಂತರ ಮುನಿರತ್ನ ಬಂಡಾಯ ಶಾಸಕರ ಗುಂಪಿಗೆ ಸೇರಿದರು, ಆದರೆ ಬಿಜೆಪಿ ಇನ್ನೂ ಆರ್ ಆರ್ ನಗರಕ್ಕೆ ಮುನಿರತ್ನ ಹೆಸರು ಘೋಷಿಸಿಲ್ಲ, ಅಕ್ಟೋಬರ್ 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಕ್ಟೋಬರ್ 16 ಕೊನೆಯ ದಿನವಾಗಿದೆ, ನವೆಂಬರ್ 3 ರಂದು ಚುನಾವಣೆ ನಡೆಯಲಿದೆ.

ಶಿರಾ ಮತ್ತು ಆರ್ ಆರ್ ನಗರದ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸದಲ್ಲಿ ತೊಡಗಿದ್ದಾರೆ, ಶಿರಾದಲ್ಲಿ ಟಿಬಿ ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಕೆಲವು ದಿನಗಳ ಹಿಂದೆಯೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಕುಸುಮಾ ಇನ್ನೂ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಆಕೆಯ ತಂದೆ ಹನುಮಂತರಾಯಪ್ಪ ಮತ್ತಿತರರು ಸ್ಥಳೀಯ ಶನಿಮಹಾತ್ಮ ದೇವಾಲಯದಲ್ಲಿ ಪ್ರಾಥಮಿಕ ಸಭೆ ನಡೆಸಿದ್ದಾರೆ.

ಇದೇ ವೇಳೆ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಮುಂದಿನ 15 ದಿನ ಪ್ರಚಾರ ಕಾರ್ಯದಲ್ಲಿ  ಭಾಗವಹಿಸುವ ಸಾಧ್ಯತೆಯಿದೆ,  ತಾಯಿಯ ಪರವಾಗಿ ಪುತ್ರ ಸತ್ಯನಾರಾಯಣ ಪ್ರಚಾರದಲ್ಲಿ ತೊಡಗಿದ್ದಾರೆ.

SCROLL FOR NEXT