ರಾಜಕೀಯ

ನಾಮಪತ್ರ ಸಲ್ಲಿಸಲು ಇನ್ನೊಂದೇ ವಾರ ಬಾಕಿ, ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಇನ್ನೂ ಘೋಷಿಸದ ಬಿಜೆಪಿ!

Sumana Upadhyaya

ಬೆಂಗಳೂರು: ತುಮಕೂರಿನ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ ತಿಂಗಳ 16 ಕೊನೆಯ ದಿನ. ಇನ್ನು ಕೇವಲ ಒಂದು ವಾರ ಬಾಕಿಯಿದೆ. ಈ ಎರಡೂ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ.

ಮೊನ್ನೆ ಅಕ್ಟೋಬರ್ 1ರಂದು ಒಟ್ಟು ಸೇರಿ ಸಭೆ ನಡೆಸಿದ ಪಕ್ಷದ ಕೋರ್ ಕಮಿಟಿ ಅಭ್ಯರ್ಥಿಗಳ ಹೆಸರುಗಳನ್ನು ಅಖೈರುಗೊಳಿಸಿದೆ, ಅದಾಗಿ 10 ದಿನಗಳೇ ಕಳೆದಿದೆ, ಆದರೆ ಕೇಂದ್ರ ನಾಯಕತ್ವ ಇನ್ನೂ ಹೆಸರುಗಳನ್ನು ಅಂತಿಮಗೊಳಿಸಿಲ್ಲ, ಇದರಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ ಹುಟ್ಟಿದೆ.

ಬಿಜೆಪಿ ಕೇಂದ್ರ ನಾಯಕತ್ವದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಡೆಯಿಂದ ಒಪ್ಪಿಗೆ ಸಿಗದಿರುವುದರಿಂದ ಈ ವಿಳಂಬವಾಗುತ್ತಿದೆ. ಇವರಿಬ್ಬರೂ ಕೇಂದ್ರ ನಾಯಕರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಇರುವ ಭಿನ್ನಮತವನ್ನು ಬಗೆಹರಿಸುವಲ್ಲಿ ಇವರಿಬ್ಬರೂ ನಿರತರಾಗಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಎನ್ ಮುನಿರತ್ನ ಅವರನ್ನು ಕಣಕ್ಕಿಳಿಸಲು ಮಾಜಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಅವರನ್ನು ಸಮಾಧಾನಪಡಿಸುವಲ್ಲಿ ನಾಯಕರುಗಳಿಗೆ ಸಮಸ್ಯೆಯಾಗುತ್ತಿದೆ. 2018ರ ಚುನಾವಣೆಯಲ್ಲಿ ಇಬ್ಬರೂ ನಾಯಕರ ಮಧ್ಯೆ ನಡೆದ ಜಗಳ ಮತ್ತು ಕಳೆದ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ನಕಲಿ ಚುನಾವಣಾ ಗುರುತು ಚೀಟಿ ಮಾಡಿ ಹಂಚಿದ್ದ ಆರೋಪ ಇವೆಲ್ಲವುಗಳಿಂದ ಪಕ್ಷದ ನಾಯಕರು ಮುನಿರತ್ನ ಅವರನ್ನು ಕಣಕ್ಕಿಳಿಸಲು ಹಿಂದೆಮುಂದೆ ನೋಡುತ್ತಿದೆ.

ಈ ವಾರಾಂತ್ಯಕ್ಕೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗುತ್ತದೆ. ಹಾಗೆಂದು ನಾವು ಉಪ ಚುನಾವಣೆ ಸಿದ್ದತೆಯಲ್ಲಿ ತಡವಾಗಿದ್ದೇವೆ ಎಂದರ್ಥವಲ್ಲ. ಪಕ್ಷ ಈಗಾಗಲೇ ಪ್ರಚಾರ ಆರಂಭಿಸಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಕೇವಲ ಶೇಕಡಾ 20ರಿಂದ 30ರಷ್ಟು ಪ್ರಚಾರ ನಡೆಸಬೇಕಷ್ಟೆ ಎಂದು ಹಿರಿಯ ಪದಾಧಿಕಾರಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಎಸ್ ಆರ್ ಗೌಡ ಮತ್ತು ಬಿ ಕೆ ಮಂಜುನಾಥ್ ಅವರ ಜೊತೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದೆ. ಪಕ್ಷದ ಅಭ್ಯರ್ಥಿಯಾಗಿ ಡಾ ರಾಜೇಶ್ ಗೌಡ ಅವರನ್ನು ಕಣಕ್ಕಿಳಿಸಲು ಅವರ ಸಹಕಾರ ಕೇಳಲಾಗಿದೆ ಎಂದರು.

SCROLL FOR NEXT