ರಾಜಕೀಯ

ರಾಜರಾಜೇಶ್ವರಿ ನಗರ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ, ಸಾಲ ಎಷ್ಟು? 

Nagaraja AB

ಬೆಂಗಳೂರು: ರಾಜರಾಜೇಶ್ವರಿನ ನಗರ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿರುವ ಮುನಿರತ್ನ ಅವರು 78 ಕೋಟಿ ರು. ಗಿಂತ ಹೆಚ್ಚು ಆಸ್ತಿ ಹೊಂದಿದ್ದು, ದ್ವಿಚಕ್ರ ವಾಹನ, ಕಾರು ಸೇರಿದಂತೆ ೩೦ ವಾಹನಗಳಿವೆ. ಚುನಾವಣಾಧಿಕಾರಿಗೆ ಬುಧವಾರ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಮುನಿರತ್ನ ಅವರು ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. 

ಮುನಿರತ್ನ ಅವರ ಬಳಿ 10.66  ಲಕ್ಷ ರು.ನಗದು ಹೊಂದಿದ್ದಾರೆ.ಮುನಿರತ್ನ ಹೆಸರಲ್ಲಿ 26.11  ಕೋಟಿ ರು.ಮೌಲ್ಯದ  ಚರಾಸ್ತಿ ಮತ್ತು 51.91 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಬಳಿ 3. 98 ಲಕ್ಷ ರು.ನಗದು ಹೊಂದಿದ್ದು, ಅವರ ಹೆಸರಲ್ಲಿ 40.97 ಲಕ್ಷ  ರು.ಮೌಲ್ಯದ ಚರಾಸ್ತಿ, 24.14 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ.

ಮುನಿರತ್ನ ವಿರುದ್ಧ ಮೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಬಗ್ಗೆಯೂ ಆಸ್ತಿ ವಿವರದಲ್ಲಿ ನಮೂದಿಸಲಾಗಿದೆ. ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಯ ಖಾತೆಯಲ್ಲಿ 1. 08 ಕೋಟಿ ರು. ಇದ್ದು, 21. 37ಕೋಟಿ ರು. ಸಾಲ ನೀಡಿದ್ದಾರೆ. ದ್ವಿಚಕ್ರ ವಾಹನ, ಕಾರುಗಳು ಸೇರಿ 1.31 ಕೋಟಿ ರು. ಮೌಲ್ಯದ ವಾಹನಗಳು ಇವೆ.

ಮುನಿರತ್ನ ಹೆಸರಲ್ಲಿ 42.03 ಕೋಟಿ ರು. ಸಾಲ ಇದ್ದು, ಪತ್ನಿ ಹೆಸರಲ್ಲಿ 4.38 ಕೋಟಿ ರು. ಸಾಲ ಇದೆ. ಮುನಿರತ್ನ ಹೆಸರಲ್ಲಿ 3 ಕೆಜಿಗೂ ಅಧಿಕ ಚಿನ್ನ, 40.94 ಕೆಜಿ ಬೆಳ್ಳಿ ಇದ್ದು, 1.23 ಕೋಟಿ ರು. ಮೌಲ್ಯದಾಗಿದೆ. ಪತ್ನಿ ಬಳಿ 4.40 ಲಕ್ಷ ರು. ಮೌಲ್ಯದ 360 ಗ್ರಾಂ ಚಿನ್ನ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಲಾಗಿದೆ.

SCROLL FOR NEXT