ರಾಜಕೀಯ

ಆರ್ ಆರ್ ನಗರ ಉಪಚುನಾವಣೆ: ಕುಸುಮಾ ಪರ ಅಕ್ಕೈ ಪದ್ಮಶಾಲಿ ತಂಡದ ಪ್ರಚಾರ

Shilpa D

ಬೆಂಗಳೂರು: ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಪರ ತೃತೀಯಲಿಂಗಿ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಮನೆ ಮನೆಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ.

ಕಳೆದ ತಿಂಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಅಕ್ಕೈ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು, ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸುಮಾರು 50 ಮಂದಿಯೊಂದಿಗೆ ಅಕ್ಕೈ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಗೊಂಡರು. ಆರ್ ಆರ್ ನಗರ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಸದಸ್ಯರೊಂದಿಗೆ ಪ್ರಚಾರ ಮಾಡುವಂತೆ ನಗರದ ಶಾಸಕರು ತಮಗೆ ಟಾಸ್ಕ್ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಅಕ್ಕೈ ತಿಳಿಸಿದ್ದಾರೆ.

ಕುಸುಮಾ ಅವರು ನಾಮಪತ್ರ ಸಲ್ಲಿಸುವ ವೇಳೆಯೂ ನಾನು ಅವರೊಂದಿಗಿದ್ದೆ ಎಂದು ಹೇಳಿದ್ದಾರೆ, ನಾನು ಬೈಯ್ಯಪ್ಪನಹಳ್ಳಿಯಲ್ಲಿ ವಾಸವಿದ್ದೇನೆ, ಬೆಳಗ್ಗೆ 10 ಗಂಟೆಗೆ ಪ್ರಚಾರ ಆರಂಭಿಸಬೇಕು, ಹೀಗಾಗಿ ನಾನು ಕೆಲ ದಿನ ನನ್ನ ದ್ವಿಚಕ್ರ ವಾಹನದಲ್ಲಿ ಬರುತ್ತೇನೆ, ಇಲ್ಲದಿದ್ದರೇ ಆರ್ ಆರ್ ನಗರಕ್ಕೆ ಮೆಟ್ರೋದಲ್ಲಿ ಬಂದು ಪ್ರಚಾರ ಆರಂಭಿಸುತ್ತೇನೆ ಎಂದಿದ್ದಾರೆ.

ಕೆಲವು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ತಂಡದೊಂದಿಗೆ ನಾವು ಸೇರಿಕೊಂಡು ಪ್ರಚಾರ ಮಾಡುತ್ತೇವೆ, ನಮ್ಮ ಸಮುದಾಯದ ಸುಮಾರು 500 ಮತಗಳು ಆರ್ ಆರ್ ನಗರದಲ್ಲಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಕ್ಕೈ ಪ್ರಚಾರ ಮಾಡುತ್ತಿರುವುದು, ಕುಸುಮಾ ಅವರಿಗೆ ಏಕೆ ಮತ ಹಾಕಬೇಕು ಎಂದು ನಾನು ಜನರಿಗೆ ವಿವರಿಸುತ್ತೇನೆ, ವಿದ್ಯಾವಂತೆಯಾಗಿರುವ ಆಕೆಗೆ ಒಂದು ಅವಕಾಶ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ, ಇದೊಂದು ಉತ್ತಮ ಅನುಭವ ಎಂದು ಹೇಳಿದ್ದಾರೆ.

ಪಕ್ಷದಿಂದ ಪಕ್ಷಕ್ಕೆ ಜಿಗಿದು ಹೇಗೆ ಚುನಾವಣೆಗೆ ಸುಮ್ಮನೆ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ತಿಳಿಸಬಯಸುತ್ತೇನೆ ಎಂದು ಹೇಳಿದ್ದಾರೆ, ರಾಜ್ಯಸಭೆ ಅಥವಾ ವಿಧಾನ ಪರಿಷತ್ ನಲ್ಲಿ  ಅಕ್ಕೈಗೆ ಸ್ಥಾನ ಕಲ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT