ರಾಜಕೀಯ

ಶಿರಾ ಉಪಚುನಾವಣೆ ಗೆಲ್ಲಲು ಬಿಜೆಪಿ ಮೈಕ್ರೋ ಮ್ಯಾನೇಜಿಂಗ್ ಜಾತಿ ಸಮೀಕರಣ!

Shilpa D

ಬೆಂಗಳೂರು: ಕಳೆದ ವರ್ಷದ ಕೆ.ಆರ್ ಪೇಟೆ ಉಪ ಚುನಾವಣೆ ತಂತ್ರವನ್ನೇ ಶಿರದಲ್ಲೂ ಪ್ರಯೋಗಿಸುವುದಾಗಿ ಬಿಜೆಪಿ ತಿಳಿಸಿದೆ. ಆದರೆ ಈ ಬಾರಿ ಮೈಕ್ರೋ ಮ್ಯಾನೇಜಿಂಗ್ ಜಾತಿ ಸಮೀಕರಣ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ.

ಇದರಂತೆ ಸಣ್ಣ ಸಣ್ಣ ಜಾತಿಗಳ ಮತದಾರರನ್ನು ಓಲೈಸಲು ಬಿಜೆಪಿ ಮುಂದಾಗಿದೆ, ಕ್ಷೇತ್ರದಲ್ಲಿ 2.1 ಲಕ್ಷ  ಮತದಾರರಿದ್ದು, ಅದರಲ್ಲಿ 50 ಸಾವಿರ ಕುಂಚಿಟಿಗ ಒಕ್ಕಲಿಗರಿದ್ದಾರೆ, ಈ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ ನ ಟಿಬಿ ಜಯಚಂದ್ರ, ಜೆಡಿಎಸ್ ನ ಅಮ್ಮಾಜಮ್ಮ, ಮತ್ತು ಬಿಜೆಪಿಯ ರಾಜೇಶ್ ಗೌಡ ಮೂವರು ಕುಂಚಿಟಿಗ ಒಕ್ಕಲಿಗ ಸಮುದಾಯದವರಾಗಿದ್ದಾರೆ.

ಈ ಕ್ಷೇತ್ರದಲ್ಲಿ ಮತದಾರರು ಯಾವಾಗಲೂ ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿಯನ್ನು ಆರಿಸುತ್ತಿದ್ದರು,  ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿಯೂ ಸ್ಪರ್ಧಿಸಿದ್ದು, ತ್ರೀಕೋಣ ಸ್ಪರ್ಧೆ ಏರ್ಪಡಲಿದೆ.

2018 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಸತ್ಯನಾರಾಯಣ 74ಸಾವಿರ, ಕಾಂಗ್ರೆಸ್ ನ ಟಿಬಿ ಜಯಚಂದ್ರ 63 ಸಾವಿರ ಮತ ಮತ್ತು ಬಿಜೆಪಿಯ ಎಸ್ ಆರ್ ಗೌಡ 17 ಸಾವಿರ ಮತ ಪಡೆದಿದ್ದರು, 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 74ಸಾವಿರ, ಜೆಡಿಎಸ್ 60 ಸಾವಿರ ಮತ್ತು ಬಿಜೆಪಿ 19 ಸಾವಿರ ಮತಗಳಿಸಿತ್ತು.

ಆದರೆ ಈ ಬಾರಿ ಬಿಜೆಪಿ ಶಿರಾ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದೆ, ಉಪ ಚುನಾವಣೆಗೆ ದಿನಾಂಕ ಪ್ರಕಟಿಸುವ ಮುನ್ನವೇ ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ಮಂಡಳಿ ರಚನೆಗೆ ನೋಟಿಫಿಕೇಷನ್ ಹೊರಡಿಸಿದ್ದು, ಶಿರಾದಲ್ಲಿ 25 ಸಾವಿರ ಕಾಡುಗೊಲ್ಲ ಸಮುದಾಯದ ಮತದಾರರಿದ್ದಾರೆ. 

ನಾವು ಶಿರಾದಲ್ಲಿ ಕ್ಲಸ್ಟರ್ ಆಧಾರದಲ್ಲಿ ಪ್ರಚಾರ ನಡೆಸುತ್ತಿದ್ದು ಬಿಜೆಪಿಯ ಎಲ್ಲಾ ನಾಯಕರಿಗೂ ಮತ್ತು ಶಾಸಕರಿಗೂ ಆಹ್ವಾನ ನೀಡಿಲ್ಲ. ನಿರ್ಧಿಷ್ಟ ಸಮುದಾಯದ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಇದರಿಂದ ಆಯಾ ವರ್ಗದ ಮತದಾರರನ್ನು ಆಕರ್ಷಿಸಲು ಕಾರಣವಾಗುತ್ತದೆ ಎಂದು ಬಿಜೆಪಿ ಎಂಎಲ್ ಸಿ ರವಿಕುಮಾರ್ ಹೇಳಿದ್ದಾರೆ.

ಶಿರಾ ಕ್ಷೇತ್ರದಲ್ಲಿ 17 ಸಾವಿರ ಕುರುಬ ಮತ್ತು 16 ಸಾವಿರ ವಾಲ್ಮೀಕಿ ಸಮುದಾಯದವರಿದ್ದಾರೆ. ಹೀಗಾಗಿ ಕೆಎಸ್ ಈಶ್ವರಪ್ಪ ಮತ್ತು ಬಿ ಶ್ರೀರಾಮುಲು ಪ್ರಚಾರಕ್ಕೆ ಬರಲಿದ್ದಾರೆ, ಆದರೆ ಲಿಂಗಾಯತ ಸಮುದಾಯದ ಮತಗಳು ಕಡಿಮೆ ಇರುವ ಕಾರಣ ನಾವು ಯಾವುದೇ ಲಿಂಗಾಯತ ನಾಯಕರನ್ನು ಆಹ್ವಾನಿಸಿಲ್ಲ ಎಂದು ಪಕ್ಷದ ಮತ್ತೊಬ್ಬ ನಾಯಕ ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಸೋತಿದ್ದ ಟಿ ಬಿ ಜಯಚಂದ್ರ ಮತ್ತು ದಿವಂಗತ ಸತ್ಯನಾರಾಯಣ ಅವರ ಪತ್ನಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅನುಕಂಪದ ಮತಗಳಿಗೆ ಜೋತು ಬಿದ್ದಿದ್ದಾರೆ. ಕುಂಚಿಟಿಗ ಸಮುದಾಯದ ಮತಗಳು ಹಂಚಿಕೆಯಾಗಲಿವೆ, ಇದರ ಜೊತೆಗೆ ಗೊಲ್ಲ, ಕುರುಬ ಮತ್ತು ನಾಯಕ ಹಾಗೂ ಇತರೆ ಸಣ್ಣ ಸಮುದಾಯಗಳ ಮತದಾರರನ್ನು ನಾವು ಸೆಳೆಯಬೇಕಾಗಿದೆ, ಗೆಲ್ಲುವುದರ ಜೊತೆಗೆ ಉತ್ತಮ ಹೋರಾಟ ಕೂಡ ನಡೆಸಬೇಕಿದೆ, ನಾವು ಇಲ್ಲಿ ಒಮ್ಮೆಯೂ ಗೆದ್ದಿಲ್ಲ, ಒಂದು ವೇಳೆ ಶಿರಾದಲ್ಲಿ ಗೆದ್ದರೇ ಕೆಆರ್ ಪೇಟೆ ಗೆಲುವಿನಂತೆಯೇ ಇದು ಐತಿಹಾಸಿಕವಾಗುತ್ತದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ತಿಳಿಸಿದ್ದಾರೆ.

SCROLL FOR NEXT