ರಾಜಕೀಯ

ನ್ಯಾ.ಸದಾಶಿವ ಆಯೋಗದ ವರದಿ ಯಥಾವತ್ ಜಾರಿಗೊಳಿಸಿ: ಕೆ.ಎಚ್.ಮುನಿಯಪ್ಪ ಆಗ್ರಹ

Manjula VN

ಬೆಂಗಳೂರು: ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರ, ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಸಮುದಾಯಗಳಲ್ಲಿ ಅವಕಾಶ ವಂಚಿತರಿಗೆ ಒಳಮೀಸಲಾತಿ ಜಾರಿಗೆ ತರುವ ಮೂಲಕ ನ್ಯಾಯ ಒದಗಿಸಬೇಕೆಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಸದಾಶಿವ ಆಯೋಗದ ವರದಿಯಂತ ಒಳಮೀಸಲು ಜಾರಿಗೆ ರಾಜ್ಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಹೇಳಿದ್ದಾರೆ. 

ದಲಿತರಲ್ಲಿ ಪ್ರಸ್ತುತ ಎಡಗೈ, ಬಲಗೈ, ಬೋವಿ, ಲಂಬಾಣಿ ಸಮುದಾಯಗಳಿವೆ. ಯಾವ ಸಮುದಾಯಗಳಿಗೂ ಅನ್ಯಾಯ ಆಗಬಾರದು. ಆ ರೀತಿ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಒಳಮೀಸಲಾತಿ ಬಗ್ಗೆ ನ್ಯಾಯಮೂರ್ತಿ ಸದಾಶಿವ ಅವರ ಸವಿಸ್ತಾರವಾದ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ್ದಾರೆ. ಪ್ರಸ್ತುತ ಸರಿಯಾದ ಪ್ರಮಾಣದಲ್ಲಿ ಮೀಸಲಾತಿ ಸಿಗುತ್ತಿಲ್ಲ. ಈ ವರದಿ ಜಾರಿಯಾದರೆ ಮೀಸಲಾತಿಗೆ ನ್ಯಾಯ ಸಿಗಲಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವರದಿ ಜಾರಿಗೆ ಮುಂದಾಗಿದ್ದರು. ಆದರೆ, ಚುನಾವಣೆ ಎದುರಾದ ಕಾರಣ ಅಲ್ಲಿಗೇ ಕೈಬಿಟ್ಟಿದ್ದರು. ವರದಿ ಜಾರಿ ವಿಷಯದಲ್ಲಿ ಈ ಹಿಂದೆ ಬಿಜೆಪಿಯವರು ಸರಿಯಾಗಿ ಬೆಂಬಲಿಸಲಿಲ್ಲ. ಈಗ ಸರ್ಕಾರವೂ ಬಿಜೆಪಿಯದ್ದೇ ಇದೆ. ಜೆಡಿಎಸ್, ಕಾಂಗ್ರೆಸ್ ಇದಕ್ಕೆ ವಿರೋಧಿಸಲ್ಲ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಕೊಳ್ಳಬೇಕು. ನಂತರ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. 

‘ಯಡಿಯೂರಪ್ಪ ಅವರು ಬಸವಣ್ಣನವರ ಅನುಯಾಯಿ. ಬಸವಣ್ಣನವರ ಸಿದ್ಧಾಂತ ಅಳವಡಿಸಿಕೊಂಡವರು. ಹೀಗಾಗಿ, ಈ ವರದಿಯನ್ನು ಜಾರಿಗೆ ತರಬೇಕು. ಆಂಧ್ರದಲ್ಲಿ ಮಂದಕೃಷ್ಣ ಮಾದಿಗ ಒಳಮೀಸಲಾತಿ  ಬಗ್ಗೆ ಹೋರಾಟ ಮಾಡಿದ್ದರು. ಕೇಂದ್ರ ಸರ್ಕಾರದ ಮುಂದೆಯೂ ಈ ಪ್ರಸ್ತಾಪವಿದೆ. ಈ ಕೆನೆಪದರ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕು. 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಮಾಡಿಸಿದ್ದರು. ಆ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಬೇಕು. ಇದರಿಂದ ಮೀಸಲಾತಿ ಬಗ್ಗೆಯೂ ತಿಳಿಯಲಿದೆ. ತುಳಿತಕ್ಕೆ ಒಳಗಾದವರಿಗೆ ವಿಶೇಷ ಸವಲತ್ತು ನೀಡಬಹುದು. ಎಸ್‌ಸಿ, ಎಸ್‌ಟಿ, ಒಬಿಸಿ ಯಾರೇ ಆಗಿರಲಿ ಅವರಿಗೂ ಮೀಸಲಾತಿ ಕೊಡಿ ಎಂದಿದ್ದಾರೆ. 

SCROLL FOR NEXT