ರಾಜಕೀಯ

ಶಿರಾ ಉಪಚುನಾವಣೆಯಲ್ಲಿ ಖಾತೆ ತೆರೆಯಲು ಬಿಜೆಪಿ ರಣತಂತ್ರ: 'ಕೈ' ಬಿಟ್ಟು 'ಕಮಲ' ಹಿಡಿಯಲಿದ್ದಾರಾ ಜಯಚಂದ್ರ?

Shilpa D

ಬೆಂಗಳೂರು: ಶಿರಾ ಉಪಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕ ಪ್ರಕಟಿಸಬೇಕಾಗಿದೆ, ಹೀಗಿರುವಾಗಲೇ ಬಿಜೆಪಿ ಶಿರಾದಲ್ಲಿ ತನ್ನ ಖಾತೆ ತೆರೆಯಲು ಕಾರ್ಯತಂತ್ರ ಪ್ರಾರಂಭಿಸಿದೆ.

ಈ ಮೊದಲು ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೋರಾಟ ನಡೆಯುತ್ತಿತ್ತು. 2018 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಸತ್ಯನಾರಾಯಣ ಶೇ.41 ರಷ್ಟು ಮತ ಪಡೆದಿದ್ದರು.

ಟಿಬಿ ಜಯಚಂದ್ರ ಶೇ,35 ರಷ್ಟು ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಎಸ್ ಆರ್ ಗೌಡ ಮೂರನೇ ಸ್ಥಾನ ಪಡೆದಿದ್ದರು. ಶೇ,9 ರಷ್ಟು ಮತ ಸ್ವತಂತ್ರ್ಯ ಅಭ್ಯರ್ಥಿ ಪಾಲಾಗಿತ್ತು.

ಈ ಬಾರಿ ಆಡಳಿತಾರೂಡ ಬಿಜೆಪಿ ಶಿರಾ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ,  ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ  ಎನ್ ರವಿ ಕುಮಾರ್ ಸೆಪ್ಟಂಬರ್ 21 ರಿಂದ ಶಿರಾದಲ್ಲಿ ಸಭೆಗಳನ್ನು ನಡೆಸಲಿದ್ದಾರೆ, ಪೇಜ್ ಪ್ರಮುಖ್ ಕಾನ್ಸೆಪ್ಟ್ ಅಡಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ರೂಟ್ ಮ್ಯಾಪ್ ಸಿದ್ದಗೊಳಿಸಿದ್ದಾರೆ. ಅಲ್ಲಿ ಪ್ರತಿ ಬೂತ್‌ನಿಂದ ಮತದಾರರ ಪಟ್ಟಿಯ ಒಂದು ಪುಟವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಪ್ರತಿ ಪುಟದಲ್ಲಿ 10 ರಿಂದ 12 ಕುಟುಂಬಗಳು ಮತದಾರರನ್ನು ಹೊಂದಿದ್ದಾರೆ.

ಮತದಾನದ ದಿನದಂದು ಈ ಮತದಾರರು ಬೂತ್‌ಗೆ ತಲುಪಿ ಬಿಜೆಪಿಗೆ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು ಪೇಜ್ ಪ್ರಮುಖ್ ಅವರ ಕೆಲಸವಾಗಿರುತ್ತದೆ. ಶಿರಾದಲ್ಲಿ ಈ ಬಾರಿ ಬಿಜೆಪಿ ಗೆಲ್ಲುತ್ತದೆ ಎಂದು ರವಿಕುಮಾರ್ ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಶಿರಾದಲ್ಲಿ 264 ಬೂತ್ ಗಳಿದ್ದು,  ಪ್ರತಿಯೊಂದು ಬೂತ್ ಗೆ ಒಂದರಂತೆ ಒಟ್ಟು 264 ಸಮಿತಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತದಾರರನ್ನು ತಲುಪಲು ವಾಟ್ಸಾಪ್  ಗುಂಪು ರಚಿಸಲಾಗಿದೆ. ಪೇಜ್ ಪ್ರಮುಖ್ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಧಾನಸಭೆ ಅಧಿವೇಶನ ಆರಂಭವಾಗುವವರೆಗೂ ಶಿರಾದಲ್ಲಿಯೇ ಉಳಿಯುವುದಾಗಿ ತಿಳಿಸಿದ್ದಾರೆ.

ಒಂದು ವೇಳೆ ಕಾಂಗ್ರೆಸ್  ಟಿಬಿ ಜಯಚಂದ್ರ ಅವರಿಗೆ ಟಿಕೆಟ್ ನೀಡದಿದ್ದರೇ , ಬಿಜೆಪಿ ಅವರನ್ನು ಸಂಪರ್ಕಿಸಿ ಪಕ್ಷದಿಂದ ಸ್ಪರ್ಧಿಸಲು ಕೇಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಸುದ್ದಿಯನ್ನು ನಿರಾಕರಿಸಿರುವ ಜಯಚಂದ್ರ, ನಾನು ಕಳೆದ 50 ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದೇನೆ, ನಾನು ಈ ಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದೇನೆ,ನಾನು ನನ್ನ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದೇನೆ, 2018 ರಲ್ಲಿ ಸಣ್ಣ ಪ್ರಮಾಣದ ಅಂತರದಲ್ಲಿ ಸೋಲನುಭವಿಸಿದ್ದೇನೆ ಎಂದು ಹೇಳಿದ್ದಾರೆ. ಈ ಸಂಬಂಧ ಜಯಚಂದ್ರ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಮೃತ ಶಾಸಕ ಸತ್ಯನಾರಾಯಣ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಲು ಜೆಡಿಎಸ್ ನಿರ್ದರಿಸಿದೆ.

SCROLL FOR NEXT