ರಾಜಕೀಯ

ಪಕ್ಷ ವಿರೋಧಿಗಳಿಗೆ ಮಣೆ: ವರಿಷ್ಠರ ವಿರುದ್ಧ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ

Shilpa D

ಅರಕಲಗೂಡು: ಜೆಡಿಎಸ್‌ನಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಮಣೆ ಹಾಕಲಾಗುತ್ತಿದ್ದು, ಇದಕ್ಕೆ ವರಿಷ್ಠರು ಬೆಂಬಲ ನೀಡುತ್ತಿರುವುದು ನೋವಿನ ಸಂಗತಿ’ ಎಂದು ಶಾಸಕ ಎ.ಟಿ.ರಾಮಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. 

‘ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹಾಗೂ ಹಾಲು ಒಕ್ಕೂಟದ ನಿರ್ದೇಶಕರೂ ಆಗಿರುವ ಹೊನ್ನವಳ್ಳಿ ಕೆ.ಸತೀಶ್ ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದನ್ನು ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಗಮನಕ್ಕೆ ತರಲಾಗಿತ್ತು.

ಆದರೂ ನನ್ನ ಅಭಿಪ್ರಾಯ ಪಡೆಯದೆ ಮೇಲಿನ ಎರಡೂ ಸ್ಥಾನಗಳಿಗೆ ಅವರನ್ನೇ ಪುನರಾಯ್ಕೆ ಮಾಡಲಾಗಿದೆ. ಇದು ಎಚ್.ಡಿ.ರೇವಣ್ಣ ಅವರ ಸರ್ವಾಧಿಕಾರಿ ಮನೋಭಾವ ತೋರಿಸುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘

ಮಾಜಿ ಸಚಿವ ಕೆ.ಬಿ.ಮಲ್ಲಪ್ಪ ಅವರ ಕಾಲದಿಂದಲೂ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಸತೀಶ್‌ ಕೆಲಸ ಮಾಡಿಲ್ಲ. ಇತ್ತೀಚೆಗೆ ನಡೆದ ನೌಕರರ ಚುನಾವಣೆ ಹಾಗೂ ಒಕ್ಕಲಿಗರ ಸಂಘದ ಚುನಾವಣೆಯಲ್ಲೂ ವಿರೋಧಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಗುಂಪುಗಾರಿಕೆ ತಡೆಗಟ್ಟುವುದನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಬೆಂಬಲವಾಗಿ ನಿಂತರೆ ತಾಯಿಯೇ ಮಗುವಿಗೆ ವಿಷ ಉಣಿಸಿದಂತೆ. ವಿಷ ತಿಂದ ಮಗು ಬದುಕಲು ಸಾಧ್ಯವೆ' ಎಂದು ಅವರು ಪ್ರಶ್ನಿಸಿದರು.

ಇತ್ತೀಚಿನ ಕೆಲವು ವಿದ್ಯಮಾನಗಳು ನನ್ನನ್ನು ಘಾಸಿಗೊಳಿಸಿವೆ. ಹೀಗಾದರೆ ಪಕ್ಷ ಸಂಘಟನೆ ಕಾರ್ಯ ಸಾಧ್ಯವಿಲ್ಲ ಎಂದು ತಮ್ಮ ಪಕ್ಷದ ಶಾಸಕರ ಮೇಲೆಯೇ ಎಟಿ.ರಾಮಸ್ವಾಮಿ  ಬೇಸರ ವ್ಯಕ್ತಪಡಿಸಿದ್ದಾರೆ .

SCROLL FOR NEXT