ರಾಜಕೀಯ

'ಬ್ಯಾಲೆನ್ಸ್' ಇಲ್ಲದ ಬೊಮ್ಮಾಯಿ ಕ್ಯಾಬಿನೆಟ್: 10 ಲಿಂಗಾಯಿತ,7 ಒಕ್ಕಲಿಗ ಸಚಿವರು; 13 ಜಿಲ್ಲೆಗಳಿಗಿಲ್ಲ ಪ್ರಾತಿನಿಧ್ಯ!

Shilpa D

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಚಿವ ಸಂಪುಟದಲ್ಲಿ ಅರ್ಧದಷ್ಟು ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಸ್ಥಾನ ಕಲ್ಪಿಸಿದ್ದಾರೆ.

ಬೊಮ್ಮಾಯಿ ಅವರನ್ನು ಸೇರಿ 10 ಲಿಂಗಾಯತ ಶಾಸಕರಿಗೆ ಸ್ಥಾನ ದೊರೆತಿದೆ. ಉಳಿದಂತೆ 7 ಒಕ್ಕಲಿಗರು, 7 ಹಿಂದುಳಿದ ವರ್ಗದ ಶಾಸಕರು ಮತ್ತು ಇಬ್ಬರು ಬ್ರಾಹ್ಮಣರಿಗೆ ಹಾಗೂ ಓರ್ವ ಎಸ್ ಟಿ ಶಾಸಕನಿಗೆ ಸಂಪುಟಗಲ್ಲಿ ಸಚಿವ ಸ್ಥಾನ ನೀಡಲಾಗಿದೆ. 

ಬಳ್ಳಾರಿ, ದಾವಣಗೆರೆ, ಹಾಸನ, ಕಲಬುರಗಿ, ರಾಯಚೂರು, ಮೈಸೂರು, ಯಾದಗಿರಿ, ಕೋಲಾರ, ರಾಮನಗರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನ ನೀಡದ ಕಾರಣ ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತಿದೆ.

ಯಡಿಯೂರಪ್ಪ ಅವರ ಅವಧಿಯಲ್ಲಿದ್ದಂತೆಯೇ ಬೊಮ್ಮಾಯಿ ಅವರ ಸಂಪುಟದಲ್ಲಿಯೂ ಜಾತಿ ಮತ್ತು ಪ್ರಾದೇಶಿಕ ಅಸಮತೋಲನ ಉಂಟಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಬೆಂಗಳೂರಿನ 8 ಶಾಸಕರಿದ್ದರು, ಹೊಸ ಸಂಪುಟದಲ್ಲಿ 7 ಮಂದಿಯಿದ್ದಾರೆ.

ಹಿಂದಿನ ಅವಧಿಯಲ್ಲಿ 7 ಒಕ್ಕಲಿಗ ಸಚಿವರಿದ್ದರು, ಹೊಸ ಸಂಪುಟದಲ್ಲಿಯೂ 7 ಒಕ್ಕಲಿಗ ಶಾಸಕರಿದ್ದಾರೆ. ಇಬ್ಬರು ಬ್ರಾಹ್ಮಣರಿದ್ದಾರೆ. ಯಡಿಯೂರಪ್ಪ ಅವಧಿಯಲ್ಲಿಯೂ 14 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಗೆ ಮಾತ್ರ ಅವಕಾಶ ನೀಡಲಾಗಿದೆ.

ಲಿಂಗಾಯತ ಪ್ರಬಲ ನಾಯಕ ಯಡಿಯೂರಪ್ಪ ಅವರ ಸ್ಥಾನಕ್ಕೆ ಮತ್ತೊಬ್ಬ ನಾಯಕನನ್ನು ಆರಿಸುವ ವೇಳೆ ಹೈ ಕಮಾಂಡ್ ಗೆ ಸಮುದಾಯದ ಬೆಂಬಲ ಕಳೆದುಕೊಳ್ಳುವುದು ಬೇಕಿರಲಿಲ್ಲ, ಹೀಗಾಗಿ ದೆಹಲಿ ನಾಯಕರು, ಯಡಿಯೂರಪ್ಪ ಆಪ್ತ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ, ಜೊತೆಗೆ ಸಚಿವ ಸಂಪುಟದಲ್ಲಿ ಲಿಂಗಾಯತ ಸಚಿವರಿಗೆ ಹೆಚ್ಚಿನ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ಒಕ್ಕಲಿಗರಿಗೂ ಬಿಜೆಪಿ ಹೆಚ್ಚಿನ ಸ್ಥಾನ ನೀಡಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

SCROLL FOR NEXT