ರಾಜಕೀಯ

ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ರೆಬೆಲ್ ಆದ ಆನಂದ್ ಸಿಂಗ್, ಎಂಟಿಬಿ ನಾಗರಾಜ್ 

Sumana Upadhyaya

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ 29 ಸಚಿವರಿಗೆ ಖಾತೆ ಹಂಚಿಕೆ ಮಾಡಿಯಾದ ಬೆನ್ನಲ್ಲೇ ಹಲವರ ಅಸಮಾಧಾನ ಸ್ಫೋಟಗೊಂಡಿದೆ. ತಮ್ಮಿಷ್ಟದ ಖಾತೆ ಸಿಕ್ಕಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ತಮಗೆ ಸಚಿವ ಸ್ಥಾನ ನೀಡಲಿಲ್ಲವೇಕೆ ಎಂದು ಮುಖ್ಯಮಂತ್ರಿಗಳ ಮನೆಬಾಗಿಲು ತಟ್ಟುತ್ತಿದ್ದಾರೆ.

ಇಂದು ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಸತೀಶ್ ರೆಡ್ಡಿ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು 1993ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿದ್ದೇನೆ, ಮೂರು ಬಾರಿ ಶಾಸಕ, ನಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿದ್ದೆ, ಸಕ್ರಿಯವಾಗಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಗುರುತಿಸಿಕೊಂಡಿದ್ದೇನೆ. ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕಾಲ ಕೂಡಿ ಬಂದಾಗ ಸ್ಥಾನ ನೀಡಲಾಗುವುದು ಎಂದು ಹೇಳಿದ್ದಾರೆ, ನಾನು ಆಶಾದಾಯಕವಾಗಿದ್ದೇನೆ ಎಂದರು.

ಇನ್ನು ಇಂದು ಬೆಳಗ್ಗೆ ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಂದಿದ್ದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಸಚಿವ ಎಂಟಿಬಿ ನಾಗರಾಜ್ ಸಹ ತಮಗೆ ಸಕ್ಕಿದ ಖಾತೆ ಬಗ್ಗೆ ಸಮಾಧಾನ,ತೃಪ್ತಿ ಹೊಂದಿಲ್ಲ, ಹೀಗಾಗಿ ಅವರು ಕೂಡ ಇಂದು ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಪೌರಾಡಳಿತ ಖಾತೆ ನೀಡಿದ್ದಕ್ಕೆ ಖ್ಯಾತೆ ತೆಗೆದಿರುವ ಎಂಟಿಬಿ ನಾಗರಾಜ್ ವಸತಿ ಖಾತೆ ನೀಡಿ,ಇಲ್ಲವೇ ಜನಪರ ಖಾತೆಯನ್ನಾದರೂ ಕೊಡಿ ಎಂದು ಮುಖ್ಯಮಂತ್ರಿಗಳನ್ನು ನೇರವಾಗಿ ಒತ್ತಾಯಿಸಿದ್ದಾರೆ. ಬಯಸಿದ ಖಾತೆ ಸಿಗದಿದ್ದರೆ ಇನ್ನೆರಡು ಮೂರು ದಿನಗಳಲ್ಲಿ ಮುಂದಿನ ತಮ್ಮ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಇನ್ನು ಸಚಿವ ಶ್ರೀರಾಮುಲು ಅವರು ಕೂಡ ಅಸಮಾಧಾನ ಹೊಂದಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಇಷ್ಟವಿಲ್ಲದ ಖಾತೆ ಕೊಟ್ಟಿದ್ದಕ್ಕೆ ಖ್ಯಾತೆ ತೆಗೆದಿರುವ ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿದೆ.

ಸಿಎಂ ಹೇಳಿಕೆ: ಸಚಿವ ಆನಂದ್ ಸಿಂಗ್ ಅವರ ಭಾವನೆಗಳನ್ನು ಹೇಳಿಕೊಂಡಿದ್ದಾರೆ, ಅವರ ಭಾವನೆ, ಮನವಿಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನೆಹರೂ ಪುತ್ಥಳಿ ಪುನರ್ ಸ್ಥಾಪಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಸಚಿವ ಎಂಟಿಬಿ ನಾಗರಾಜ್ ಅವರ ಜೊತೆ ಕೂಡ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. 

SCROLL FOR NEXT