ರಾಜಕೀಯ

ಜೀವಂತ ಇದ್ದರೆ ಇದೇ ಅವಧಿಯಲ್ಲಿ, ಸತ್ತರೆ ಮುಂದಿನ ಅವಧಿಯಲ್ಲಿ ಸಿಎಂ ಆಗುವೆ: ಸಚಿವ ಉಮೇಶ್ ಕತ್ತಿ 

Sumana Upadhyaya

ಬಾಗಲಕೋಟೆ: ಅತೃಪ್ತ ಶಾಸಕರ ಸಂಖ್ಯೆ ಕೇಸರಿ ಪಡೆ ಬಿಜೆಪಿಯಲ್ಲಿ ಮುಂದುವರಿದಿದೆ. ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರದಲ್ಲಿ ಕೂಡ ಅತೃಪ್ತರ ಸಂಖ್ಯೆ ಮುಂದುವರಿದಿದ್ದು ದಿನಕ್ಕೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.

ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಇಂದು ಸ್ವಾತಂತ್ರ್ಯ ದಿನಾಚರಣೆ ದಿನ ಮತ್ತೊಮ್ಮೆ ಆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಕೂಡ ಮುಖ್ಯಮಂತ್ರಿ ಆಗಬಹುದು ಎಂದು ಬಾಂಬ್ ಸಿಡಿಸಿದ್ದಾರೆ.

ಜೀವಂತ ಇದ್ದರೇ ಇದೇ ಅವಧಿಯಲ್ಲಿ, ಸತ್ತರೆ ಮುಂದಿನ ಅವಧಿಯಲ್ಲಿ ಸಿಎಂ ಆಗುವೆ. ಸತ್ತರೆ ನನ್ನ ಕಡೆಯಿಂದ ಏನೂ ಮಾಡೋಕೆ ಆಗಲ್ಲವೆಂದು ಗಹಿಗಹಿಸಿ ನಕ್ಕು ಸುತ್ತಮುತ್ತಲಿನವರನ್ನು ನಗಿಸಿ ಸ್ಫೋಟಕ ಹೇಳಿಕೆ ನೀಡಿ ತಮಗಿನ್ನೂ ಸಿಎಂ ಆಗುವ ಆಸೆಯಿದೆ ಎಂದು ಸಿಎಂ ಕುರ್ಚಿ ಮೇಲೆ ಟವಲ್ ಹಾಕಿ ಕಾದು ಕುಳಿತಿರುವ ಸಂದೇಶ ನೀಡಿದ್ದಾರೆ.

ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ‌ ನೆರವೇರಿಸಿದರು. ನಂತರ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಷಣೆ ಮಾಡಿದರು.

ರಾಜ್ಯದ ಜನತೆ ತೀರ್ಮಾನಿಸಲಿ: ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಿಸುವಂತೆ ಸಿ ಟಿ ರವಿ ಹೇಳಿದ್ದಾರೆ. ಇದು ಯಾವ ಪಕ್ಷಕ್ಕೆ ಸಂಬಂಧಿಸಿದ ಹೆಸರಲ್ಲವಲ್ಲ. ಈ ಬಗ್ಗೆ ಜನತೆ ತೀರ್ಮಾನಿಸಲಿ ಎಂದರು.

SCROLL FOR NEXT