ರಾಜಕೀಯ

ಪರಿಷತ್ ಚುನಾವಣೆ: ಮೈಸೂರು, ಚಾಮರಾಜನಗರ ಕ್ಷೇತ್ರದಲ್ಲಿ ಮತ ಚಲಾಯಿಸಲು ಸಹಾಯಕರನ್ನು ಕೋರಿದ 57 ಜನಪ್ರತಿನಿಧಿಗಳು!

Nagaraja AB

ಮೈಸೂರು: ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ 57 ಅನಕ್ಷರಸ್ಥ ಹಾಗೂ ದಿವ್ಯಾಂಗ ಮತದಾರರು ತಮ್ಮ ಮತ ಚಲಾಯಿಸಲು ಸಹಾಯಕರ ನೆರವನ್ನು ಕೋರಿರುವುದಾಗಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ. ಈ 57 ಮತದಾರರ ಪೈಕಿ ಏಳು ಮಂದಿ ಮೈಸೂರಿನವರಾಗಿದ್ದು, ಉಳಿದವರು ಚಾಮರಾಜನಗರ ಜಿಲ್ಲೆಯವರಾಗಿದ್ದಾರೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಲಿಂಗ ಮತ್ತು ಸಾಕ್ಷರತೆಯ ಆಧಾರದ ಮೇಲೆ ತಾಲೂಕ್ ಪಂಚಾಯಿತಿಗಳು ಮತದಾರರ ಪಟ್ಟಿ ಸಿದ್ಧಪಡಿಸಿದ್ದು, ಅನೇಕರು ತಮ್ಮ ಸಹಿ ಹಾಕಲು ಮಾತ್ರ ಕಲಿತಿದ್ದಾರೆ ಎಂದು ಕಂಡುಬಂದಿದೆ.  ಮತ ಚಲಾಯಿಸಲು ಅರ್ಹರಾಗಿರುವ ಐವತ್ತೇಳು ಸದಸ್ಯರು, ಅನಕ್ಷರಸ್ಥರು ಅಥವಾ ದಿವ್ಯಾಂಗರಾಗಿದ್ದು, ತಮ್ಮ ಪ್ರಾಶಸ್ತ್ಯದ ಮತಗಳನ್ನು ಚಲಾಯಿಸಲು ಸಹಾಯಕರನ್ನು ಒದಗಿಸುವಂತೆ ಸ್ಥಳೀಯ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಹಿಂದಿನ ಚುನಾವಣೆಯಲ್ಲಿ 600ಕ್ಕೂ ಹೆಚ್ಚು ಮತಗಳು ಅಸಿಂಧುಗೊಂಡಿದ್ದರಿಂದ ರಾಜಕೀಯ ಪಕ್ಷಗಳ ಹೊರತಾಗಿ ಚುನಾವಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳು ಪ್ರಾಶಸ್ತ್ಯದ ಮತ ಚಲಾವಣೆ ಕುರಿತು ಮತದಾರರಿಗೆ ತಾಲೀಮು ನಡೆಸಿದ್ದಾರೆ. ಅಮಾನ್ಯ ಮತಗಳು ತಮ್ಮ ಭವಿಷ್ಯವನ್ನು ಹಾಳುಮಾಡಬಹುದು ಎಂಬ ಭಯ ಅಭ್ಯರ್ಥಿಗಳಿಗೆ ಇದೆ.

ಈ ಮಧ್ಯೆ ಮೈಸೂರು ಮತ್ತು ಚಾಮರಾಜನಗರದ ಮಿನಿ ವಿಧಾನಸೌಧದಲ್ಲಿ ನಡೆಯುತ್ತಿರುವ ಮತದಾನ ಕಾರ್ಯದಲ್ಲಿ ಸುಮಾರು 1,800 ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. 393 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದ್ದು, 2,172 ಪುರುಷರು, 1,082 ಮಹಿಳೆಯರು ಮತ್ತು ಇತರ ಇಬ್ಬರು ಸೇರಿದಂತೆ ಒಟ್ಟು 6,771 ಮತದಾರರಿದ್ದಾರೆ.

ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಡಾ. ತಿಮ್ಮಯ್ಯ, ಬಿಜೆಪಿಯಿಂದ ರಘು ಕೌಟಿಲ್ಯ , ಜೆಡಿಎಸ್ ನಿಂದ ಸಿ.ಎನ್. ಮಂಜೇಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಚುನಾವಣಾ ಕಣದಲ್ಲಿದ್ದಾರೆ. ಡಿಸೆಂಬರ್ 14 ರಂದು ಮತಗಳ ಎಣಿಕೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. 

SCROLL FOR NEXT