ರಾಜಕೀಯ

ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಕೊಡಗಿನಲ್ಲಿ ಬಿಜೆಪಿ, ಹಾಸನದಲ್ಲಿ ಸೂರಜ್ ರೇವಣ್ಣ, ಬೀದರ್ ನಲ್ಲಿ ಕಾಂಗ್ರೆಸ್ ಗೆಲುವು

Sumana Upadhyaya

ಕೊಡಗು/ಹಾಸನ: ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಕೊಡಗು ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ನೂರಾ ಐದು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದು, 705 ಮತಗಳು ಬಂದಿವೆ. ಕಾಂಗ್ರೆಸ್ ನ ಮಂಥರ್ ಗೌಡ ಅವರಿಗೆ 603 ಮತಗಳು ಸಿಕ್ಕಿವೆ.

ಕೊಡಗು ಕ್ಷೇತ್ರದಲ್ಲಿ 1299 ಮತಗಳು ಚಲಾವಣೆಯಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಸ್ಪರ್ಧಿಸಿದ್ದರು.

ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವಿನ ಗರಿ ಮೂಡಿಸಿಕೊಂಡಿದ್ದಾರೆ.ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಸೂರಜ್ ರೇವಣ್ಣ, 2247 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ವಿಶ್ವನಾಥ್ 374 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಎ ಶಂಕರ್ 747 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಡಾ ಸೂರಜ್ ರೇವಣ್ಣ ಮೊದಲ ಚುನಾವಣೆಯಲ್ಲೇ ಗೆದ್ದು ಬೀಗಿದ್ದು ಈ ಮೂಲಕ ವಿಧಾನಸೌಧಕ್ಕೆ ಕಾಲಿಡುತ್ತಿದ್ದು, ದೇವೇಗೌಡರ ಕುಟುಂಬದ ಕುಡಿ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುತ್ತಿದ್ದಾರೆ. 

ಕಲಬುರಗಿಯ ಸ್ಥಳೀಯ ಸಂಸ್ಥೆಗಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗಾಗಿ ಮತಪೆಟ್ಟಿಗೆಗಳನ್ನು ಎಣಿಕೆ ಸಭಾಂಗಣಕ್ಕೆ ತರುತ್ತಿರುವುದನ್ನು ನೋಡಬಹುದು. ರಾಜ್ಯದ ಬಳ್ಳಾರಿ, ಕೋಲಾರ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಮುಂದುವರಿದಿದೆ. 

ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಬಿ ಪಾಟೀಲ್ ಗೆಲುವು ಸಾಧಿಸಿದ್ದು ಈ ಮೂಲಕ ಇದುವರೆಗೆ ಮೂರೂ ಪಕ್ಷಗಳಿಗೆ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದಂತಾಗಿದೆ. 

SCROLL FOR NEXT