ರಾಜಕೀಯ

ರೈತರ ಮನವೊಲಿಸಬಹುದು, ಆದರೆ ರಾಜಕೀಯ ಪ್ರೇರಿತರನ್ನಲ್ಲ: ಶೋಭಾ ಕರಂದ್ಲಾಜೆ

Manjula VN

ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾದದ್ದು ಎಂದು ನೂತನ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬಳು ರೈತನ ಕುಟುಂಬದಿಂದ ಬಂದವಳಾಗಿದ್ದೇನೆ. ಕೇಂದ್ರವು ರೈತರ ಹಿತದೃಷ್ಟಿಯಿಂದ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದೆ. ನಾನು ರೈತರೊಂದಿಗೆ ಮಾತುಕತೆ ನಡೆಸಬಹುದು. ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡಬಹುದು. ಆದರೆ, ರಾಜಕೀಯದಿಂದ ಪ್ರೇರಿತರಾದವರೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾದದ್ದು, ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ. ರಾಜಕೀಯದಿಂದ ಪ್ರೇರಿತರಾದ ವ್ಯಕ್ತಿಗಳು ರೈತರನ್ನು ಬಲಿಪಶುಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮೂರು ಕಾಯ್ದೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಕಾಯ್ದೆ ಕುರಿತು ರೈತರ ಬಳಿಯೇ ಹೋಗಿ ಅದರ ಲಾಭ ಹಾಗೂ ಪ್ರಯೋಜನಗಳನ್ನು ವಿವರಿಸುತ್ತೇವೆಂದು ತಿಳಿಸಿದ್ದಾರೆ. 

ಶೋಭಾ ಕರಂದ್ಲಾಜೆಯವರ ಈ ಹೇಳಿಕೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀವ್ರವಾಗಿ ಕಿಡಿಕಾರಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೇಳಿಕೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಅವರ ಹೇಳಿಕೆ ಅವರು ಈ ವಿಚಾರವಾಗಿ ಯಾವ ಮಟ್ಟದಲ್ಲಿ ನಿರ್ಲಕ್ಷ್ಯ ಹೊಂದಿದ್ದಾರೆಂಬುದನ್ನು ತೋರಿಸುತ್ತದೆ. ಒಬ್ಬ ಸಚಿವರಾಗಿ ರೈತರಗೊಂದಿಗೆ ಮಾತುಕತೆ ನಡೆಸಬೇಕು. ಪರಿಹಾರ ನೀಡಬೇಕು. ಅದು ಬಿಟ್ಟು ರೈತರ ಕೆಣಕುವುದು ಮತ್ತು ಅಪಹಾಸ್ಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. 

SCROLL FOR NEXT