ರಾಜಕೀಯ

ದಾವಣಗೆರೆ: ಬಂಜಾರ ಸಮಾವೇಶದಲ್ಲಿ 'ಡಿಕೆಶಿ ಮುಂದಿನ ಸಿಎಂ' ಘೋಷಣೆ ಕೂಗಿದ ಕಾರ್ಯಕರ್ತರು!

Manjula VN

ದಾವಣಗೆರೆ: ಮುಂದಿನ ಸಿಎಂ ಯಾರಾಗಬೇಕೆಂಬ ಬಗ್ಗೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅಭಿಮಾನಿಗಳ ನಡುವೆ ಚರ್ಚೆಗಳು ನಡೆಯುತ್ತಿವೆ ನಡೆಯುತ್ತಿರುವ ನಡುವಲ್ಲೇ ರಾಜ್ಯದಲ್ಲಿ 'ಮುಂದಿನ ಸಿಎಂ ಡಿಕೆ. ಶಿವಕುಮಾರ್‌ಗೆ ಜೈ' ಎಂಬ ಘೋಷಣೆ ಮತ್ತೆ ಮೊಳಗಿದೆ. 

ನ್ಯಾಮತಿ ತಾಲೂಕಿನ ಬಂಜಾರ ಸಮುದಾಯ ಏಕೈಕ ಧರ್ಮಕ್ಷೇತ್ರ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಅವರು ಗುರುವಾರ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ಬಂಜಾರ ಸಮುದಾಯ ಮುಖಂಡರು ಹಾಗೂ ಜನರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಸೂರಗೊಂಡನಕೊಪ್ಪಕ್ಕೆ ತೆರಳುವ ಮಾರ್ಗ ಮಧ್ಯೆ ಬಾಡಾ ಕ್ರಾಸ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಸ್ವಾಗತ ಕೋರಲಾಯಿತು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಮುಂದಿನ ಸಿಎಂ ಡಿ. ಕೆ. ಶಿವಕುಮಾರ್ ಗೆ ಜೈ ಎಂಬ ಘೋಷಣೆಗಳನ್ನು ಕೂಗಿದರು. 

ಇದೇ ವೇಳೆ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಶಿವಗಂಗಾ ಬಸವರಾಜ್ ಪರ ಕೂಡ ಘೋಷಣೆಗಳು ಕೇಳಿ ಬಂದವರು. ಆದರೆ ಸ್ಥಳದಲ್ಲಿದ್ದ ಯಾವ ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯರಿಗೆ ಜೈ ಎಂದು ಹೇಳಲಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಹರಿಹರಕ್ಕೆ ಶಾಸಕ ರಾಮಪ್ಪರ ಪುತ್ರಿ ವಿವಾಹದಲ್ಲಿ ಪಾಲ್ಗೊಳ್ಳಲು ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯರಿಗೆ ಜೈ ಜೈ ಘೋಷಣೆ ಹಾಕಿದ್ದರು‌. ಕೇವಲ ಹದಿಮೂರು ದಿನಗಳ ಅಂತರದಲ್ಲಿ ಮತ್ತೆ ಡಿಕೆಶಿ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ದಾವಣಗೆರೆಯಲ್ಲಿ ಕೇಳಿ ಬಂದಿದೆ. 

ಡಿ‌‌. ಕೆ. ಶಿವಕುಮಾರ್ ಕಾರು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಗಿಬಿದ್ದರು. ಈ ವೇಳೆ ಸಾಮಾಜಿಕ ಅಂತರ ಮಾಯವಾಗಿತ್ತು. ಇನ್ನು ಕೆಲವರು ಮಾಸ್ಕ್ ಧರಿಸಿರಲಿಲ್ಲ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದರೂ ಯಾರೂ ತಲೆಕೆಡಿಸಿಕೊಳ್ಳದಿರುವುದು ಕಂಡು ಬಂದಿತ್ತು. 

ಇನ್ನು ಬಂಜಾರ ಸಮುದಾಯದ ಜನರನ್ನುದ್ದೇಶಿಸಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ವೇಳೆ ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಕ್ಕೆ ಆದ್ಯತೆ ನೀಡಿ ಅಭಿವೃದ್ಧಿ ಯೋಜನೆಗಳ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT