ರಾಜಕೀಯ

ಬೆಂಬಲಿಗರ ಬಾಯಿಗೆ ಬೀಗ ಹಾಕಿ, ಜೋಡೆತ್ತುಗಳಂತೆ ಕೆಲಸ ಮಾಡಿ: ಸಿದ್ದರಾಮಯ್ಯ -ಡಿಕೆಶಿಗೆ ರಾಹುಲ್ ಕಿವಿಮಾತು

Shilpa D

ಬೆಂಗಳೂರು: ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂಬ ವಿಚಾರ ಚರ್ಚೆಯ ಮುನ್ನೆಲೆಗೆ ಬಂದ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಸೃಷ್ಟಿ ಆಗಿರುವ ಕಂದಕವನ್ನು ಮುಚ್ಚಲು ಇಬ್ಬರನ್ನೂ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿತ್ತು.

ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಜೋಡೆತ್ತುಗಳಂತೆ ಕೆಲಸ ಮಾಡುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರನ್ನೂ ಕೂರಿಸಿಕೊಂಡು ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ ರಾಹುಲ್ ಗಾಂಧಿ ಅವರು ನೀವಿಬ್ಬರು ಜೊತೆಯಾಗಿ ಕೆಲಸ ಮಾಡಿ. ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ. ಸದ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರಗಳಿಂದ ಜನ ಬೇಸತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಜನರಲ್ಲಿ ಭರವಸೆ ಮೂಡಿಸಬೇಕು. ಆ ಕೆಲಸವನ್ನು ಮಾಡಿ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ‌ ಹೈಕಮಾಂಡ್ ನಾಯಕರು ಮತ್ತು ಶಾಸಕರು ಸೇರಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಈಗ ಈ‌ ವಿಷಯ ಅಪ್ರಸ್ತುತ. ಅಪ್ರಸ್ತುತವಾದ ವಿಷಯದ ಬಗ್ಗೆ ಮಹತ್ವ ನೀಡಿ ಅವಕಾಶ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ ತಿಳಿದುಬಂದಿದೆ.

ಇದಕ್ಕೂ ಮುನ್ನ ದೆಹಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಜೊತೆಯಾಗಿಯೇ ಇದ್ದೇವೆ. ಜೊತೆ ಜೊತೆಯಾಗಿಯೇ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಒಡಕು ಮತ್ತು ಭಿನ್ನಾಭಿಪ್ರಾಯವಿಲ್ಲ. ನಾವೀಗ ಪ್ರತಿಪಕ್ಷದಲ್ಲಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಿರುವಾಗ ಒಡಕಿನ ಮಾತೇಕೆ ಬರುತ್ತದೆ ಎಂದು ಹೇಳಿದರು.

SCROLL FOR NEXT