ರಾಜಕೀಯ

ಇದು 'ಪದತ್ಯಾಗ' ಅಲ್ಲ, 'ಪದಚ್ಯುತಿ' ಎನ್ನುವುದನ್ನು ಕಣ್ಣೀರು ಹೇಳುತ್ತಿದ್ದವು: ಯಡಿಯೂರಪ್ಪ ರಾಜೀನಾಮೆ ಕುರಿತು ಕಾಂಗ್ರೆಸ್ ಪ್ರತಿಕ್ರಿಯೆ

Manjula VN

ಬೆಂಗಳೂರು: ಇದು 'ಪದತ್ಯಾಗ' ಅಲ್ಲ, 'ಪದಚ್ಯುತಿ' ಎನ್ನುವುದನ್ನು ಕಣ್ಣೀರು ಹೇಳುತ್ತಿದ್ದವು ಎಂದು ರಾಜ್ಯ ಕಾಂಗ್ರೆಸ್ ಪಕ್ಷವು ಯಡಿಯೂರಪ್ಪ ರಾಜೀನಾಮೆ ಕುರಿತು ಸೋಮವಾರ ವ್ಯಂಗ್ಯವಾಡಿದೆ. 

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಇದು 'ಪದತ್ಯಾಗ' ಅಲ್ಲ, 'ಪದಚ್ಯುತಿ' ಎನ್ನುವುದನ್ನು ಕಣ್ಣೀರು ಹೇಳುತ್ತಿದ್ದವು ಎಂದು ವ್ಯಂಗ್ಯವಾಡಿದೆ. 

ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ. ಅವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ 'ಪದಚ್ಯುತಿ' ಮಾಡಿದ್ದೇಕೆ ಎಂದು ಪ್ರಶ್ನಿಸಿದೆ. 

ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು "ನಾಯಕತ್ವ ಬದಲಾವಣೆ" ಅಲ್ಲ "ಸರ್ಕಾರದ ಬದಲಾವಣೆ" ಬಿಜೆಪಿಗೆ ತಾಕತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿ ಎಂದು ಹೇಳಿದೆ. 

ವೈಫಲ್ಯಕ್ಕಾಗಿಯೇ? ಒತ್ತಡಕ್ಕಾಗಿಯೇ? ಅಸಹಕಾರಕ್ಕಾಗಿಯೇ? ಬೆದರಿಕೆಗಾಗಿಯೇ? ಬ್ಲಾಕ್‌ಮೇಲ್‌ಗಾಗಿಯೇ? ಯಾವ ಕಾರಣಕ್ಕಾಗಿ ಕಣ್ಣೀರಿನೊಂದಿಗೆ ರಾಜೀನಾಮೆ ನೀಡಿದ್ದು ಎನ್ನುವುದನ್ನ ರಾಜ್ಯದ ಜನತೆಗೆ ತಿಳಿಸುವಿರಾ ಯಡಿಯೂರಪ್ಪ  ಅವರೇ? ಸಮರ್ಪಕ ಆಡಳಿತ ನಡೆಸಲು ನಿಮಗೆ ಯೋಗ್ಯತೆ ಒದಗಿಬರುವುದು ಯಾವಾಗ ಹೇಳುವಿರಾ ಎಂದು ಕೇಳಿದೆ.

SCROLL FOR NEXT