ರಾಜಕೀಯ

ಹೊಸ ಸಂಪುಟದಲ್ಲಿ ಯಡಿಯೂರಪ್ಪ ನಿಷ್ಠಾವಂತರು, ಕೆಲಸ ಮಾಡದ ಸಚಿವರಿಗೆ ಕೊಕ್ ಸಾಧ್ಯತೆ

Lingaraj Badiger

ಬೆಂಗಳೂರು: ಬಿ.ಎಸ್.ಯಡಿಯುರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ, ಹೊಸದಾಗಿ ಆಯ್ಕೆಯಾಗುವ ಸಿಎಂ ಅವರು ಯಡಿಯೂರಪ್ಪ ಸಂಪುಟದ ಅನೇಕ ಹಿರಿಯ ಸಚಿವರನ್ನು ಕೈಬಿಡಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.

ಯಡಿಯುರಪ್ಪ ರಾಜೀನಾಮೆ ನೀಡಿದ ಒಂದು ದಿನದ ನಂತರ, ಕೇಂದ್ರ ಬಿಜೆಪಿ ನಾಯಕರು ಸಂಪುಟ ಪುನಾರಚನೆ ಮಾಡಲು ಉತ್ಸುಕರಾಗಿದ್ದಾರೆ ಮತ್ತು ಹೊರಹೋಗುವ ಸಿಎಂ ಅವರ ನಿಷ್ಠಾವಂತರು ಮತ್ತು ಸರಿಯಾದ ಕೆಲಸ ಮಾಡದ ಹಲವು ಸಚಿವರನ್ನು ಕೈಬಿಡುವ ಸಾಧ್ಯತೆಯಿದೆ. ಈ ಪಟ್ಟಿಯಲ್ಲಿ ಹಿರಿಯ ಸಚಿವರು ಮತ್ತು ಉಪಮುಖ್ಯಮಂತ್ರಿಗಳೂ ಸೇರಿದ್ದಾರೆ.

ರಾಜ್ಯ ಬಿಜೆಪಿ ಘಟಕದ ನಾಯಕರು ತಮ್ಮ ಸರ್ಕಾರದ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಯಡಿಯುರಪ್ಪ ಅವರ ಸಂಪುಟದಲ್ಲಿದ್ದ ಸಚಿವರು ಪ್ರಮುಖ ಖಾತೆಗಳು ಕೈತಪ್ಪಿದ್ದರೂ ಹೊಸ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆಯಬಹುದು ಎಂದು ನಂಬಿದ್ದಾರೆ. 

ಇನ್ನೂ ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿ 54 ವರ್ಷದ ಬಿ.ಎಲ್.ಸಂತೋಷ್ ಮುಂಚೂಣಿಯಲ್ಲಿದ್ದು, ಅವರ ಹೆಸರನ್ನು ಇಂದು ರಾತ್ರಿ ಅಥವಾ ನಾಳೆ ಅಧಿಕೃತಗೊಳಿಸುವ ಸಾಧ್ಯತೆ ಇದೆ.

ಸಂತೋಷ್ ಅವರು ಸೂರತ್‌ಕಲ್‌ನ ಪ್ರತಿಷ್ಠಿತ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಆರ್‌ಎಸ್‌ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಪೂರ್ಣ ಪ್ರಮಾಣದ ಬಿಜೆಪಿ ಕಾರ್ಯಕರ್ತರಾಗಿದ್ದ ಅವರನ್ನು ಸುಮಾರು ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ನೇಮಕ ಮಾಡಲಾಗಿದೆ. 

ನೂತನ ಸಿಎಂ ಆಯ್ಕೆ ಸಂಬಂಧ ಇಂದು ದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಇಲ್ಲಿಯೇ  ಬಹುತೇಕ ನೂತನ ನಾಯಕನ ಆಯ್ಕೆ ಅಂತಿಮವಾಗಲಿದೆ ಎಂದೂ  ಹೇಳಲಾಗುತ್ತಿದೆ.

ಇಂದು ಸಂಜೆ ನಡೆಯಲಿರುವ ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್   ಸಿಂಗ್ ಮೊದಲಾದವರು ಭಾಗಿಯಾಗಿ ಹೊಸ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡಲಿದ್ದಾರೆ .

ನಂತರ ನಡೆಯುವುದೆಲ್ಲ ಕೇವಲ  ಔಪಚಾರಿಕ ಎಂದು  ಬಿಜೆಪಿಯ ಮೂಲಗಳು ಹೇಳಿವೆ. ಕೇಂದ್ರ ಸಚಿವರಾದ ಜಿ.ಕಿಷನ್ ರೆಡ್ಡಿ-   ಧರ್ಮೇಂದ್ರ ಪ್ರಧಾನ್ ಅವರುಗಳನ್ನು ಕೇಂದ್ರದ ಉಸ್ತುವಾರಿಗಳನ್ನಾಗಿ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ ಎಂದೂ ಬಿಜೆಪಿ ಮೂಲಗಳು ತಿಳಿಸಿವೆ.

SCROLL FOR NEXT