ರಾಜಕೀಯ

ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಆಯ್ಕೆ: ಹೈಕಮಾಂಡ್ ಮೇಲೆ ಯಡಿಯೂರಪ್ಪ ಕೈ ಮೇಲು, ಪ್ರಭಾವ ಉಳಿಸಿಕೊಂಡ 'ರಾಜಾಹುಲಿ'

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಸಿಎಂ ನಾಯಕತ್ವ ಬದಲಾವಣೆಯ ಹೈಡ್ರಾಮಕ್ಕೆ ಕೊನೆಗೂ ಫುಲ್ ಸ್ಟಾಪ್ ಬಿದ್ದಿದೆ. ಬಿ ಎಸ್ ಯಡಿಯೂರಪ್ಪನವರು ಕಣ್ಣೀರಿನ ವಿದಾಯ ಹಾಕಿದ್ದಾರೆ.

ಮುಖ್ಯಮಂತ್ರಿ ಪದವಿಯ ತ್ಯಾಗದ ನಡುವೆ ಅವರ ಆಪ್ತ ಶಿಷ್ಯ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾರೆ ಎನ್ನುವುದು ಯಡಿಯೂರಪ್ಪನವರಿಗೆ ಮತ್ತು ಅವರ ಬಣದ ನಾಯಕರಿಗೆ ಸಮಾಧಾನದ ಸಂಗತಿಯಾಗಿದೆ. ಬಸವರಾಜ ಬೊಮ್ಮಾಯಿಯವರನ್ನು ಯಡಿಯೂರಪ್ಪನವರ ಶಿಫಾರಸು ಮೇರೆಗೆ ಮುಖ್ಯಮಂತ್ರಿ ಮಾಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ನೂತನ ಮುಖ್ಯಮಂತ್ರಿಯ ಆಯ್ಕೆ ವಿಚಾರದಲ್ಲಿ ಖುದ್ದು ಯಡಿಯೂರಪ್ಪನವರೇ ಮಧ್ಯೆ ಪ್ರವೇಶಿಸಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಯಾಗಬೇಕೆಂದು ಮತ್ತು ಮಠದ ಸ್ವಾಮೀಜಿಗಳು ಮತ್ತು ನಾಯಕರಿಂದ ಒತ್ತಡ ಕೂಡ ಬಸವರಾಜ ಬೊಮ್ಮಾಯಿಯವರ ಆಯ್ಕೆ ಹಿಂದಿನ ಕಾರಣವಾಗಿದೆ. ಕಳೆದ ಮಂಗಳವಾರ ರಾತ್ರಿಯೇ ಯಡಿಯೂರಪ್ಪನವರು ಬೊಮ್ಮಾಯಿಯವರ ಆಯ್ಕೆಗೆ ಒಲವು ತೋರಿಸಿದ್ದರು ಎಂದು ತಿಳಿದುಬಂದಿದೆ.

ಯಡಿಯೂರಪ್ಪನವರ ಬೆಂಬಲಿಗರು ಖುದ್ದಾಗಿ 60ಕ್ಕೂ ಹೆಚ್ಚು ಶಾಸಕರಿಗೆ ಕಳೆದ ಮಂಗಳವಾರ ದೂರವಾಣಿ ಕರೆ ಮಾಡಿ ಬಿಜೆಪಿ ಶಾಸಕಾಂಗ ಪಕ್ಷ ಸಭೆಯಲ್ಲಿ ಬೊಮ್ಮಾಯಿಯವರೇ ಮೊದಲ ಆಯ್ಕೆಯಾಗಿ ಮಾಡಬೇಕೆಂದು ಒತ್ತಡ ಹೇರಿದ್ದರು. ಯಡಿಯೂರಪ್ಪನವರು ಮುಖ್ಯಮಂತ್ರಿ ಪದವಿಯಿಂದ ಇಳಿಯುವಾಗ ತಾವು ಸೂಚಿಸಿದ ಅಭ್ಯರ್ಥಿಯನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕೇಂದ್ರ ನಾಯಕರಿಗೆ ಒತ್ತಡ ಹೇರಿದ್ದರು ಎಂದು ಕೂಡ ತಿಳಿದುಬಂದಿದೆ.

ಕೊನೆಗೆ ಹಲವು ಸುತ್ತಿನ ಮಾತುಕತೆ, ಚರ್ಚೆ, ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ನಡುವಿನ ಸಮಾಲೋಚನೆ, ಹೈಡ್ರಾಮಾಗಳ ಮಧ್ಯೆ ಮುರುಗೇಶ್ ನಿರಾಣಿ ಹಾಗೂ ಜಗದೀಶ್ ಶೆಟ್ಟರ್ ಬದಲಿಗೆ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಎಂದು ಆಯ್ಕೆ ಮಾಡಲಾಯಿತು. ಅದಕ್ಕೆ ಮುಖ್ಯ ಕಾರಣ ಯಡಿಯೂರಪ್ಪನವರ ಆಯ್ಕೆ. ಹೀಗಾಗಿ ರಾಜ್ಯದ ವಿರೋಧಿ ಬಣದವರಿಗೆ ಒಪ್ಪದೆ ಬೇರೆ ಮಾರ್ಗವಿರಲಿಲ್ಲ. 

SCROLL FOR NEXT