ರಾಜಕೀಯ

ಮೈಸೂರು ಐಎಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಭೂ ಹಗರಣ ಕಾರಣ, ತನಿಖೆ ನಡೆಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

Manjula VN

ಬೆಂಗಳೂರು: ರಾಜ್ಯದ ಇಬ್ಬರು ಐಎಎಸ್ ಅಧಿಕಾರಿಗಳ ಬಹಿರಂಗ ಕಿತ್ತಾಟಕ್ಕೆ ಭೂ ಹಗರಣ ಕಾರಣ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಸರ್ಕಾರ ಕೂಡಲೇ ಹಗರಣದ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆ ಮೂಲಕ ತನಿಖೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. 

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮೈಸೂರು ಮಹಾ ನಗರಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾನಾಗ್ ಮತ್ತು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಡುವಿನ ಜಗಳಕ್ಕೆ ಬಿಜೆಪಿಯ ಸಂಸದ, ಶಾಸಕರು ಮತ್ತು ಜೆಡಿಎಸ್‍ ಶಾಸಕ ಸಾ.ರಾ. ಮಹೇಶ್ ಕಾರಣ. ಮೊದಲಿಗೆ ಒಬ್ಬ ಐಎಎಸ್ ಅಧಿಕಾರಿಯನ್ನು ಬಿಜೆಪಿಯವರು ಬೆಂಬಲಿಸಿದರು. ಅದರಲ್ಲೂ ಸಂಸದ ಪ್ರತಾಪ್ ಸಿಂಹ ಮೊದಲು ರೋಹಿಣಿ ಸಿಂಧೂರಿ ಪರ ಇದ್ದರು. ಬಳಿಕ ವಿರೋಧಿಸಿದರು. ಇಬ್ಬರು ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದವರೇ ಬಿಜೆಪಿ ಶಾಸಕರು’ ಎಂದು ಆರೋಪಿಸಿದ್ದಾರೆ. 

‘ಇಂತಹ ಸಂದರ್ಭದಲ್ಲಿ ಜಿಲ್ಲಾ ಮಂತ್ರಿ ಏನು ಮಾಡುತ್ತಿದ್ದರು. ಅವರ ವೈಫಲ್ಯ ಅಲ್ಲವೇ’ ಎಂದು ಪ್ರಶ್ನಿಸಿದರು. ‘ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾನಾಗ್ ಅವರನ್ನು ಕೂರಿಸುವ ಪ್ರಯತ್ನ ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಬಿಜೆಪಿಯ ಸಂಸದ, ಶಾಸಕರು ಎತ್ತಿ ಕಟ್ಟಿದರು’ ಎಂದು ಟೀಕಿಸಿದ್ದಾರೆ.

SCROLL FOR NEXT