ರಾಜಕೀಯ

ಈ ದೇಶದಲ್ಲಿ ಪ್ರಧಾನಿ ಮೋದಿಯವರ ಗಡ್ಡ ಮತ್ತು ಪೆಟ್ರೋಲ್ ಬೆಲೆ ಬೆಳೆಯುತ್ತಲೇ ಇದೆ: ದಿನೇಶ್ ಗುಂಡೂರಾವ್

Sumana Upadhyaya

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಶುಕ್ರವಾರದಿಂದ 5 ದಿನಗಳ ಕಾಲ ದೇಶಾದ್ಯಂತ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.

ಪ್ರತಿಭಟನೆ ವೇಳೆ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಶಾಸಕ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಮೋದಿ ಸರ್ಕಾರ ಬಂದ ಮೇಲೆ ದೇಶದ ಜನರು ಇನ್ನಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಜನರಿಗೆ ಎಷ್ಟೇ ತೊಂದರೆ ಕೊಟ್ಟರೂ, ಎಷ್ಟೇ ಸಮಸ್ಯೆಯಾದರೂ ಕೂಡ ವೋಟ್ ಹಾಕುತ್ತಾರೆ ಎಂದು ಮೋದಿ ಭಾವಿಸಿದ್ದಾರೆ. ಜನರ ಸಮಸ್ಯೆಗಳಿಗೆ ಗಮನ ಕೊಡಬೇಕಾಗಿಲ್ಲ ಎಂಬ ಉಡಾಫೆ ಧೋರಣೆ ತಳೆದಿದ್ದಾರೆ. ಕಣ್ಣು-ಕಿವಿ, ಬಾಯಿ ಇಲ್ಲದಿರುವ ಸರ್ಕಾರವೆಂದರೆ ಅದು ಮೋದಿ ಸರ್ಕಾರ ಎಂದು ಟೀಕಿಸಿದರು.

ಮೋದಿ ನೋಟ್ ಬ್ಯಾನ್ ಮಾಡಿ ಜನರನ್ನ ಕ್ಯೂನಲ್ಲಿ ನಿಲ್ಲಿಸಿದರು. ಕೋವಿಡ್ ಬಂದು ಜನರ ಪರಿಸ್ಥಿತಿ ಅಯೋಮಯವಾಗಿದೆ. ಮೋದಿ ಅವರ ಬಿಳಿ ಗಡ್ಡ, ಪೆಟ್ರೋಲ್ ಬೆಲೆ ಮಾತ್ರ ಬೆಳೆಯುತ್ತಿದೆ. ಈ ರೀತಿಯ ಆಡಳಿತ ದೇಶದ ಪರಿಸ್ಥಿತಿಯನ್ನು ಹದಗೆಡಿಸಿದೆ. ಅವರು ತಾನೊಬ್ಬ ನಾಯಕ, ಮಹಾ ನಾಯಕ ಅಂದುಕೊಂಡಿದ್ದಾರೆ. ತಮ್ಮ ಹೆಸರಲ್ಲಿ ಸ್ಟೇಡಿಯಂ ಕಟ್ಟಿಸಿಕೊಂಡಿದ್ದಾರೆ. ಇದು ಕಿವುಡ, ಮೂಕ ಸರ್ಕಾರ. ಮನಮೋಹನ್ ಸಿಂಗ್ ಇದ್ದಾಗ ಕಚ್ಚಾ ತೈಲ ಬೆಲೆ ಹೆಚ್ಚಾಗಿತ್ತು, ಆದರೂ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡಲಾಗುತ್ತಿತ್ತು. ಈಗ ಕಡಿಮೆ ದರ ಇದ್ದರೂ ಹೆಚ್ಚು ಬೆಲೆಗೆ ಮಾರಲಾಗುತ್ತಿದೆ ಎಂದು ಆರೋಪಿಸಿದರು.

ಮೋದಿಗೆ ಅಭಿನಂದನೆ: ಇಂದು ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿದೆ, ಇದಕ್ಕಾಗಿ ಮೋದಿಯವರಿಗೆ ಅಭಿನಂದನೆಗಳು, ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನೀವು ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಬಿಳಿ ಗಡ್ಡ ಮತ್ತು ಪೆಟ್ರೋಲ್ ಬೆಲೆ ಬಹಳ ಚೆನ್ನಾಗಿ ಏರುತ್ತಿದೆ ಎಂದು ವ್ಯಂಗ್ಯವಾಡಿದರು.

ಪೆಟ್ರೋಲ್ ಬೆಲೆ ಹೆಚ್ಚಳದಿಂದ ಈ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ಪರಿಣಾಮ ಬೀರುತ್ತಿದೆ. ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿದ್ದಾಗ ಪೆಟ್ರೋಲ್, ಡೀಸೆಲ್ ದರ 2 ರೂಪಾಯಿ, 3 ರೂಪಾಯಿ ಹೆಚ್ಚಳವಾದಾಗ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮೊದಲಾದವರೆಲ್ಲ ಪ್ರತಿಭಟನೆ ಮಾಡಿದ್ದರು, ಈಗ ಬರೀ 6 ತಿಂಗಳಲ್ಲಿ 42 ಬಾರಿ ಏರಿಕೆಯಾಗಿ 100 ರೂಪಾಯಿಯಾಗಿದೆ, ಇವತ್ತು ಎಲ್ಲಾ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ ಎಂದು ಆರೋಪಿಸಿದರು.

SCROLL FOR NEXT