ರಾಜಕೀಯ

ಯೋಗೇಶ್ವರ್ ಹುಚ್ಚ, ರಾಜಕೀಯದಲ್ಲಿ ಬಚ್ಚಾ; ಆಡಳಿತದಲ್ಲಿ ವಿಜಯೇಂದ್ರ ಎಳ್ಳಷ್ಟೂ ಹಸ್ತಕ್ಷೇಪವಿಲ್ಲ: ತಂದೆ-ಮಗನ ಪರ ಬಿಜೆಪಿ ಬ್ಯಾಟಿಂಗ್

Shilpa D

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಬಿ.ಎಸ್‌.ಯಡಿಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗಳ ಬಗ್ಗೆ ವಿವರಣೆ ಪಡೆಯುವುದಾಗಿ ತಿಳಿಸಿದ್ದಾರೆ.

ನಳಿನ್ ಕುಮಾರ್ ಹೇಳಿಕೆ ನಂತರ ಹಲವು ಬಿಜೆಪಿ ಶಾಸಕರು ಮತ್ತು ಸಚಿವರು ಸಿಎಂ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಬೆಂಬಲಕ್ಕೆ ನಿಂತಿದ್ದಾರೆ, ವಿಜಯೇಂದ್ರ ಸರ್ಕಾರದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ತಂದೆ ಮಗನ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಚಿವ ಸಿ.ಪಿ.ಯೋಗೇಶ್ವರ್‌ ಹುಚ್ಚ. ಆತನಿಗೆ ಎಲ್ಲೋ ತಲೆಕೆಟ್ಟಿರಬೇಕು. ಇದು ನಾಯಕತ್ವ ಬದಲಾವಣೆ ಮಾಡುವ ಸಮಯವೇ’ ಎಂದು ಕೆಎಸ್‌ಆರ್‌ಟಿಸಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಕಿಡಿಕಾರಿದರು. ‘ಯಾವ ಸ್ಥಾನಮಾನ ಇಲ್ಲದವನನ್ನು ಕರೆತಂದು ವಿಧಾನಪರಿಷತ್ ಸದಸ್ಯರಾಗಿ ಮಾಡಿ ಸಚಿವ ಸ್ಥಾನ ನೀಡಲಾಯಿತು. ರಾಜಕೀಯದಲ್ಲಿ ಆತ ಇನ್ನೂ  ಬಚ್ಚಾ. ಅಧಿಕಾರದ ಅಮಲಿನಲ್ಲಿ ಮನಬಂದಂತೆ ವರ್ತನೆ ಸರಿಯಲ್ಲ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ‘ಯಡಿಯೂರಪ್ಪ ನಾಯಕತ್ವ ಬದಲಾವಣೆ ಕನಸಿನ ಮಾತು’ ಎಂದಿದ್ದಾರೆ.

ನಮ್ಮ ಮುಂದೆ ಕೋವಿಡ್ ನಿಯಂತ್ರಣವೊಂದೆ ಈಗ ಇರುವ ಗುರಿ. ಇದನ್ನು ಬಿಟ್ಟು ನಾಯಕತ್ವ ಬದಲಾವಣೆ ಸೇರಿ ಬೇರೆ ಯಾವುದೇ ಗುರಿಗಳಿಲ್ಲ ಎಂದು ಸಚಿವ ಎಸ್. ಸುರೇಶಕುಮಾರ್ ತಿಳಿಸಿದರು‌. ನಾಯಕತ್ವ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ನಮ್ಮ ಮುಂದೆ ಕೋವಿಡ್ ನಿಯಂತ್ರಣ ಬಿಟ್ಟು ಬೇರೆ ಯಾವುದೇ ಗುರಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದರು.

ಮೂರು ಪಕ್ಷ ಬದಲಾವಣೆ ಮಾಡಿ ಬಂದವರು ಮಾತ್ರ, ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರ ಎಂದು ಹೇಳಲು ಸಾಧ್ಯ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆ ಕುರಿತಂತೆ, ‘ನಮ್ಮ ಸರ್ಕಾರ ಯಾವುದೇ ಪಕ್ಷದ ಜತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ’ ಎಂದರು. ವಿಜಯೇಂದ್ರ ಅವರು ಆಡಳಿತದಲ್ಲಿ ಎಳ್ಳಷ್ಟೂ ಹಸ್ತಕ್ಷೇಪ ಮಾಡಿರುವ ನಿದರ್ಶನವಿಲ್ಲ. ನನ್ನ ಇಲಾಖೆಯನ್ನು ಮುಕ್ತವಾಗಿ ನಿರ್ವಹಿಸುತ್ತಿದ್ದೇನೆ. ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ’ ಎಂದು ಸೋಮಶೇಖರ್‌ ತಿಳಿಸಿದರು.

ಇದೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಿಕ್ಕಮಗಳೂರಿನಲ್ಲಿರುವ ಶಾಸಕ ಸಿಟಿ ರವಿ ಅವರ ನಿವಾಸಕ್ಕೆ ಅಚ್ಚರಿಯ ಭೇಟಿ ನೀಡಿದರು, ಇಬ್ಬರು ಮಧ್ಯಾಹ್ನದ ಭೋಜನ ಒಟ್ಟಿಗೆ ಸವಿದಿದ್ದಾರೆ.
 

SCROLL FOR NEXT