ರಾಜಕೀಯ

ಹಾನಗಲ್ ಕ್ಷೇತ್ರದಲ್ಲಿನ ಸೋಲು ಬಿಜೆಪಿಗೆ ಮುಖಭಂಗ: ಡಿ ಕೆ ಶಿವಕುಮಾರ್

Sumana Upadhyaya

ಬೆಂಗಳೂರು: ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರ ಗೆಲುವಿನ ಹುಮ್ಮಸ್ಸಿನಲ್ಲಿ ಮಾತನಾಡಿದ ಅವರು, ಸಿಎಂ ಸೇರಿದಂತೆ ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು ತೀವ್ರ ಪ್ರಚಾರ ಮಾಡಿದ್ದರು. ಕೆಲವು ಸ್ನೇಹಿತರು ಬ್ಯಾಗ್ ಕೂಡ ತೆಗೆದುಕೊಂಡು ಹೋಗಿ ಕೊಟ್ಟರು. ಆದರೂ ಅವರಿಗೆ ಮತದಾರ ಒಲಿಯಲಿಲ್ಲ, ಹಾನಗಲ್ ಕ್ಷೇತ್ರದ ಜನತೆಗೆ ಸೆಲ್ಯೂಟ್ ಹೇಳಬಯಸುತ್ತೇನೆ ಎಂದರು.

ಸಿಂದಗಿ ಕ್ಷೇತ್ರದಲ್ಲಿ ನಾವು ಎರಡನೇ ಸ್ಥಾನಕ್ಕೆ ಬಂದಿದ್ದು ಫಲಿತಾಂಶ ಸಮಾಧಾನ ತಂದಿದೆ. ಅಲ್ಲಿಯೂ ಗೆಲ್ಲುವ ವಿಶ್ವಾಸ ನನಗಿತ್ತು, ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜನ ಕಾಂಗ್ರೆಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ, ಸಮಾಧಾನ ತಂದಿದೆ. ಒಟ್ಟಾರೆ ಫಲಿತಾಂಶ ನೋಡಿದರೆ ರಾಜ್ಯದ ಜನತೆ ಬಿಜೆಪಿ ಆಡಳಿತದಿಂದ ಬದಲಾವಣೆ ಬಯಸುತ್ತಿದ್ದಾರೆ. ಮತದಾರರು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದರು.

ಮತದಾರ ಕಾಂಗ್ರೆಸ್ ಕಡೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಜನರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ ಎಂದರು. 
ಹಾನಗಲ್ ಕ್ಷೇತ್ರದ ಗೆಲುವಿಗೆ ಸರ್ಕಾರ ಜೊತೆಗೆ ಏನೇನು ಕೂರಿಸಿಕೊಂಡಿದ್ದರು. ಆದರೆ ಹಾನಗಲ್ ಕ್ಷೇತ್ರದ ಜನರು ಸ್ವಾಭಿಮಾನ ಮತದಾರರು, ಈ ಫಲಿತಾಂಶ ಇಡೀ ಬಿಜೆಪಿಗೆ ಮುಖಭಂಗ. ಕೆಲವರು ವೈಯಕ್ತಿಕ ಅಜೆಂಡಾ ಇಟ್ಟುಕೊಂಡಿರುತ್ತಾರೆ, ಒಂದೇ ಚೇರ್ ಇಟ್ಟುಕೊಂಡು ಸಂಗೀತ ಖುರ್ಚಿ ಆಡುತ್ತಿರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

SCROLL FOR NEXT