ರಾಜಕೀಯ

ಹಾನಗಲ್ ಸೋಲನ್ನು ಗೆಲುವಾಗಿ ಪರಿವರ್ತಿಸಲಾಗುವುದು: ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಮೈಸೂರು: ಸಿಂದಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್​ನಲ್ಲಿ ಅನುಭವಿಸಿರುವ ಸೋಲನ್ನು ಗಂಭೀರವಾಗಿ ಪರಿಗಣಿಸಿ, ಸೋಲನ್ನು ಗೆಲುವಾಗಿ ಪರಿವರ್ತನೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉಪ ಚುನಾವಣೆ: ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು, ಸಿಂದಗಿಯಲ್ಲಿ ಬಿಜೆಪಿಯ ರಮೇಶ ಭೂಸನೂರಗೆ ಜಯ
ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಉಪಚುನಾವಣೆ ಫಲಿತಾಂಶ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಎಂ,  ಸಿಂದಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ನಮ್ಮ ಮತದಾರರಿಗೆ ಹಾಗೂ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಹಾನಗಲ್‌ನಲ್ಲಿ ನಮ್ಮ ನಿರೀಕ್ಷೆ ಮಟ್ಟಕ್ಕೆ ಮತಗಳು ದೊರೆತಿಲ್ಲ. ಮುಖ್ಯವಾಗಿ ಹಿರಿಯರಾದ ಸಿ ಎಂ ಉದಾಸಿಯವರಿಗಿದ್ದ ಬೆಂಬಲವನ್ನು ನಾವು ಪಡೆಯಲು ಸಾಧ್ಯವಾಗಿಲ್ಲ. ಪಕ್ಷದ ಹಿರಿಯರು, ನಾಯಕರು ಹಾಗೂ ಪದಾಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ: ಬಿಎಸ್ ವೈ
ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಕಳೆದ ಮೂರು ವರ್ಷ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮಾಡಿರುವ ಉತ್ತಮ ಕೆಲಸಗಳು ಕೂಡಾ ಅವರ ಗೆಲುವಿಗೆ ಕಾರಣವಾಗಿವೆ. ಆದಾಗ್ಯೂ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೂ 2018ರಲ್ಲಿ ನಡೆದ ವಿಧಾಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋತಿತ್ತು ಎಂದು ಮುಖ್ಯಮಂತ್ರಿ ಹೇಳಿದರು.

SCROLL FOR NEXT