ರಾಜಕೀಯ

ನಟ ಪುನೀತ್ ರಾಜ್ ಕುಮಾರ್'ಗೆ ಕರ್ನಾಟಕ ರತ್ನ, ಪದ್ಮಶ್ರೀ ನೀಡಬೇಕು: ಡಿ.ಕೆ.ಶಿವಕುಮಾರ್

Manjula VN

ಬೆಂಗಳೂರು: ಹಠಾತ್ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಮೇರು ವ್ಯಕ್ತಿ ಹಾಗೂ ಅಜಾತ ಶತ್ರು. ಹೀಗಾಗಿ ರಾಜ್ಯ ಜನತೆಯ ಒತ್ತಾಯದಂತೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಜೊತೆಗೆ ಮುಖ್ಯರಸ್ತೆಗೆ ಅವರ ಹೆಸರಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿನಿಮಾ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪುನೀತ್ ಮಾಡಿದ ಸಾಧನೆ ದೊಡ್ಡದು. ಜೊತೆಗೆ ಅವರು ಅಜಾತ ಶತ್ರುವಾಗಿ ಬಾಳಿದವರು. ಹೀಗಾಗಿ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಗೆ ಇಡಬೇಕು. ಪದ್ಮಶ್ರೀ, ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಿಂದೆ ಬಂಗಾರಪ್ಪನವರ ಸರ್ಕಾರ ಇದ್ದಾಗ ವರನಟ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಈಗ ಪುನೀತ್ ಅವರಿಗೆ ಈ ಗೌರವ ನೀಡಲು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಆಗ್ರಹಿಸುತ್ತೇನೆಂದು ಹೇಳಿದ್ದಾರೆ.

ಇನ್ನು ಪುನೀತ್ ಅವರು ನಿಧನದಿಂದ ರಾಜ್ಯ ಈ ಬಾರಿ ಬಹಳ ಕೆಟ್ಟ ಕನ್ನಡ ರಾಜ್ಯೋತ್ಸವ ಕಂಡಿದೆ. ಕಳೆದ ಒಂದೂವರೆ ವರ್ಷದಿಂದ ಕೊರೋನಾದಿಂದ ರಾಜ್ಯ ಹಾಗೂ ದೇಶದಲ್ಲಿ ಕತ್ತಲೆಯಲ್ಲಿ ಮುಳುಗಿದ್ದವು. ಇದೀಗ ಈ ಬೆಳಕಿನ ಹಬ್ಬದ ಮೂಲಕ ಬೆಳಕು ದೊರೆಯುವಂತಾಗಲಿ ಎಂದು ಶುಭ ಹಾರೈಸುತ್ತೇನೆಂದು ತಿಳಿಸಿದ್ದಾರೆ.

SCROLL FOR NEXT