ಅಂಜನಾದ್ರಿ ಬೆಟ್ಟ(ಕೊಪ್ಪಳ): ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಇದ್ದರೆ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಒಂದು ಹೆಸರು ಹೇಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಮಾತನಾಡಿದ ಅವರು, ನಿಜಕ್ಕೂ ಪ್ರಾಮಾಣಿಕ ಇದ್ರೆ ನೀವು ಒಂದು ಹೆಸರು ಹೇಳಿ.. ನೀವು ಹೆಸರು ಹೇಳಿದ್ರೆ ನಾನು ಶಹಬಾಸ್ ಅಂತಾ ಹೇಳ್ತೀನಿ, ನಿಮ್ಮಲ್ಲಿ ದಾಖಲೆ ಇಟ್ಟುಕೊಂಡು ಏನು ಮಾಡುತ್ತೀರಿ, ಅದನ್ನು ಬಿಡುಗಡೆ ಮಾಡಿ ಎಂದರು.
ಈ ರಾಜ್ಯದ, ದೇಶದ ಹಿತದೃಷ್ಟಿಯಿಂದ ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿದ್ದವರು ಮತ್ತು ಇರುವವರ ಹೆಸರುಗಳನ್ನು ಬಹಿರಂಗಪಡಿಸಿ, ಇಲ್ಲದಿದ್ದರೆ ಈ ರಾಜ್ಯ, ದೇಶದ್ರೋಹಿಗಳಿಗೆ ನೀವು ಕಾಂಗ್ರೆಸ್ ನಾಯಕರು ರಕ್ಷಣೆ ಕೊಡುತ್ತಿದ್ದೀರಿ ಎಂದು ಅರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಬರೀ ಪುಕ್ಸಟೆ ಆರೋಪಗಳನ್ನು ಮಾಡುತ್ತಿದ್ದಾರೆ, ಸಾವಿರಾರು ಕೋಟಿ ಹಗರಣ ಎನ್ನುತ್ತಿದ್ದಾರೆ, ದಾಖಲೆಯಿದ್ದರೆ ಬಿಡುಗಡೆ ಮಾಡಿ, ಈ ಅಂಜನಾದ್ರಿ ಪವಿತ್ರ ಬೆಟ್ಟದಲ್ಲಿ ಅವರ ಹೆಸರುಗಳನ್ನು ಹೇಳಲು ನಾಲಿಗೆ ಬರುತ್ತಿಲ್ಲ ಎಂದರು.