ರಾಜಕೀಯ

12 ವರ್ಷಗಳ ಬಳಿಕ ಸದಸ್ಯತ್ವ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ: ನ.14 ರಿಂದ ಆರಂಭ

Manjula VN

ಶಿವಮೊಗ್ಗ: ನ.14ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು ಗುರುವಾರ ಹೇಳಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸುಮಾರು 12 ವರ್ಷಗಳ ನಂತರ ಸದಸ್ಯತ್ವ ಅಭಿಯಾನವನ್ನು ಅರಂಭವಾಗಲಿದ್ದು, ಈ ಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಮಲ್ಲಿಕಾರ್ಜುನಖರ್ಗೆ ಸೇರಿ ಎಲ್ಲಾ ನಾಯಕರು, ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ.

ಶಿವಮೊಗ್ಗ ಜಿಲ್ಲೆಯಿಂದಲೂ ಎಲ್ಲಾ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ತು ಸದಸ್ಯರು ಎಲ್ಲಾ ಘಟಕಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಶಿವಮೊಗ್ಗದಲ್ಲಿಯೂ ನ.19ರಿಂದ ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ದಿನದಂದು ಸದಸ್ಯತ್ವ ಅಭಿಯಾನ ಆರಂಭವಾಗಲಿದೆ.ಎರಡು ತಿಂಗಳ ಕಾಲ ಈ ಅಭಿಯಾನ ನಡೆಯಲಿದೆ. ಬಿಜೆಪಿ ಸರ್ಕಾರದ ವೈಫಲ್ಯವನ್ನು ಗ್ರಾಮಮಟ್ಟದಲ್ಲಿ ಜನರಿಗೆ ತಿಳಿಸಲು ಪಕ್ಷ ನಿರ್ಧರಿಸಿದ್ದು, ಸ್ವಾತಂತ್ರ್ಯ ನಂತರ ಮತ್ತು ಪೂರ್ವದಲ್ಲಿ ಪಕ್ಷದ ಕೊಡುಗೆಯನ್ನು ತಿಳಿಸಲು ಪಕ್ಷದ ನಾಯಕರಿಂದ ಗ್ರಾಮವಾಸ್ತವ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಳಿಕ ವಿಧಾನಪರಿಷತ್ ಚುನಾವಣೆ ಕುರಿತು ಮಾತನಾಡಿದ ಅವರು, ಚುನಾವಣಗಾಗಿ ಕಾಂಗ್ರೆಸ್ ಪಕ್ಷದಿಂದ ಆರ್.ಪ್ರಸನ್ನಕುಮಾರ್ ಹಾಗೂ ವೈ.ಹೆಚ್.ನಾಗರಾಜ್ ಆಕಾಂಕ್ಷಿಗಳಿದ್ದು, ಆಕಾಂಕ್ಷಿಗಳು ಹೆಚ್ಚಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಬಾರಿ ಪಕ್ಷದ ವತಿಯಿಂದ ಸ್ಪರ್ಧಿಸಲು ರೂ.1 ಲಕ್ಷ ಶುಲ್ಕ ನಿಗದಿಪಡಿಸಲಾಗಿದೆ. ಇಬ್ಬರೂ ಶುಲ್ಕ ಭರಿಸಿ ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಹೈ ಕಮಾಂಡ್'ಗೆ ಬಿಟ್ಟ ವಿಚಾರವಾಗಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪಾತ್ರ ಇರುವುದಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ತಿಳಿಸಿದರು.

ಬಿಟ್ ಕಾಯಿನ್ ಹಗರಣ ಕುರಿತು ಮಾತನಾಡಿ ಬಿಜೆಪಿ ಈಗ ಜಿಲ್ಲಾ ನಾಯಕರು ಸೇರಿದಂತೆ ಬಿಜೆಪಿ ನಾಯಕರ ಮಕ್ಕಳು ಈ ಹಗರಣದಲ್ಲಿ ಭಾಗಿಯಾಗಿರುವ ಶಂಕೆಗಳಿವೆ. ಈ ಕುರಿತು ಸತ್ಯಾಸತ್ಯತೆ ಬಹಿರಂಗಗೊಳ್ಳಲು ಸೂಕ್ತ ರೀತಿಯ ತನಿಖೆಯ ಅಗತ್ಯವಿದೆ. ಕಾಂಗ್ರೆಸ್ ಪಕ್ಷದ ನಾಯಕರೇನಾದರೂ ಭಾಗಿಯಾಗಿದ್ದರೆ, ಅವರಿಗೂ ಶಿಕ್ಷೆಯಾಗಲಿ ಎಂದಿದ್ದಾರೆ.

SCROLL FOR NEXT