ರಾಜಕೀಯ

ಬಿಟ್ ಕಾಯಿನ್ ಕೇಸಿನ ದಾಖಲೆಯಿದ್ದರೆ 'ಇಡಿ'ಗೊ, ನಮ್ಮ ಪೊಲೀಸರಿಗೋ ಕೊಡಿ: ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಸವಾಲು

Sumana Upadhyaya

ಬೆಂಗಳೂರು: ಬಿಟ್ ಕಾಯಿನ್ ಕೇಸಿನಲ್ಲಿ ದಾಖಲೆಗಳಿದ್ದರೆ ಜಾರಿ ನಿರ್ದೇಶನಾಲಯಕ್ಕೆ ಅಥವಾ ಪೊಲೀಸರಿಗೆ ನೀಡಲಿ ಅದರಲ್ಲಿ ಏನಾದರೂ ಲೋಪದೋಷಗಳಿದ್ದರೆ ಮುಂದಿನ ತನಿಖೆ ಮಾಡುತ್ತೇವೆ ಎಂದು ಈ ಹಿಂದೆ ಕೂಡ ಹೇಳಿದ್ದು, ಈಗಲೂ ಹೇಳುತ್ತಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪುನರುಚ್ಛರಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ವಿಶೇಷತೆಯಿಲ್ಲ, ಅದನ್ನು ಜೀವಂತವಾಗಿಡಬೇಕೆಂದು ವಿರೋಧ ಪಕ್ಷದವರು ನೋಡುತ್ತಿದ್ದಾರೆ, ಅದು ಅವರ ರಾಜಕೀಯ ಬಿಟ್ಟರೆ ಇದರಲ್ಲೇನೂ ಇಲ್ಲ. ಈ ಬಗ್ಗೆ ವಿರೋಧ ಪಕ್ಷದವರನ್ನು ಪ್ರಶ್ನೆ ಕೇಳಿ ಎಂದು ಸಿಎಂ ಸುದ್ದಿಗಾರರಿಗೆ ಹೇಳಿದರು.

ಇನ್ನು ನಿನ್ನೆ ಮಾತನಾಡಿದ್ದ ಸಿಎಂ, ಬಿಟ್ ಕಾಯಿನ್ ಬಗ್ಗೆ 2016ರಿಂದಲೇ ಕೇಸು ಇದೆ, ಆಗ ರಾಜ್ಯದಲ್ಲಿದ್ದುದು ಕಾಂಗ್ರೆಸ್ ಸರ್ಕಾರ, ಅವರೇಕೆ ಆಗ ಕ್ರಮ ಕೈಗೊಳ್ಳಲಿಲ್ಲ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ನವರು ಮಾತನಾಡಬೇಕು, 2018ರಲ್ಲಿ ಶ್ರೀಕಿಯನ್ನು ಬಂಧಿಸಿ ಏಕೆ ಬಿಟ್ಟಿರಿ, ಇಬ್ಬರು ಇದ್ದಾರೆ ಪ್ರಕರಣದಲ್ಲಿ ಎಂದು ಹೇಳುತ್ತಿದ್ದಾರೆ, ಅವರು ಯಾರು, ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದರು. 

ಕಾಂಗ್ರೆಸ್ ನವರು ಸಾವಿರ ಸುಳ್ಳುಗಳನ್ನು ಹೇಳಿ ಸತ್ಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಶ್ರೀಕಿ ಬಂಧಿಸಿದ್ದಾಗಲೇ ತನಿಖೆ ಮಾಡಬೇಕಿತ್ತು. ಪ್ರಕರಣ ದೊಡ್ಡದಾದಾಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹಗರಣ ಬಗ್ಗೆ ನಮ್ಮ ಸರ್ಕಾರ ತನಿಖೆ ನಡೆಸುತ್ತಿದೆ.ಇದನ್ನು ಬಯಲಿಗೆಳೆದಿದ್ದೇ ಬಿಜೆಪಿ ಸರ್ಕಾರ. ಕಾಂಗ್ರೆಸ್ ನವರು ದಾಖಲೆಯಿದ್ದರೆ ನಮಗೆ ಅಥವಾ ಇಡಿಗೆ ಕೊಡಲಿ, ಸುಮ್ಮನೆ ಆರೋಪ ಮಾಡುವುದಲ್ಲ, ಪುರಾವೆಗಳಿದ್ದರೆ ನೀಡಲಿ, ಇದರಲ್ಲಿ ಯಾರನ್ನೂ ಬಿಡುವುದಿಲ್ಲ, ಎಷ್ಟೇ ಪ್ರಭಾವಿಗಳಿದ್ದರೂ ತನಿಖೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದರು.

SCROLL FOR NEXT