ರಾಜಕೀಯ

ಕೆಎಎಸ್ ಅಧಿಕಾರಿ ರಾಜಿನಾಮೆ ಅಂಗೀಕಾರ: ತುಮಕೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ!

Shilpa D

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್. ಆರ್ ಅವರು ಸಲ್ಲಿಸಿದ್ದ ರಾಜಿನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ.

ಡಿಸೆಂಬರ್ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ತುಮಕೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ಕಣಕ್ಕಿಳಿಯಲಿದ್ದಾರೆ.

41 ವರ್ಷದ ಅನಿಲ್ ಕುಮಾರ್ ಕೆಐಎಡಿಬಿ ವಿಶೇಷ ಭೂ ಸ್ವಾದೀನ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.  ಅವರು ವಿಆರ್ ಎಸ್ ತೆಗೆದುಕೊಳ್ಳಲು ಬಯಸಿ ಅರ್ಜಿ ಸಲ್ಲಿಸಿದ್ದರು, ಆದರೆ ಅವರ ವಿರುದ್ಧ ಕೆಲ ಪ್ರಕರಣಗಳು ಬಾಕಿ ಉಳಿದಿದ್ದ ಕಾರಣ ಸರ್ಕಾರ ವಿಆರ್ ಎಸ್ ಗೆ ಅನುಮತಿ ನೀಡಿರಲಿಲ್ಲ.

ಅದಾದ ನಂತರ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರಿಂದ ಸರ್ಕಾರ ಷರತ್ತುಬದ್ಧವಾಗಿ ರಾಜಿನಾಮೆ ಅಂಗೀಕಾರ ಮಾಡಲಾಗಿದೆ.  ಅವರ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳು ಬಾಕಿಯಿದ್ದು, ವಯಕ್ತಿಕ ಕಾರಣಗಳ ಆಧಾರದ ಮೇಲೆ ರಾಜಿನಾಮೆ ಅಂಗೀಕರಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಿದೆ.

ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು  ಅನಿಲ್ ಕುಮಾರ್ ಅವರ ರಾಜೀನಾಮೆ ಪತ್ರವನ್ನು 'ಶೀಘ್ರ ವಿಲೇವಾರಿ' ಮಾಡುವಲ್ಲಿ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  ತಮ್ಮ ಹುದ್ದೆ ತೊರೆಯುತ್ತಿರುವುದಕ್ಕೆ ತಮಗೆ ಯಾವುದೇ ವಿಷಾಧವಿಲ್ಲ, ರಾಜಕೀಯದ ಹೊರತಾಗಿಯೂ ನನ್ನ ಬಳಿ ಹಲವು ಪ್ರಾಜೆಕ್ಟ್ ಗಳಿವೆ ಎಂದು ಅನಿಲ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಶನಿವಾರ ಔಪಚಾರಿಕವಾಗಿ ನಾಮಪತ್ರ ಸಲ್ಲಿಸಲಿದ್ದು ಮತ್ತೆ ಮಂಗಳವಾರ ಕುಮಾರಸ್ವಾಮಿ ಅವರ ಜೊತೆಗೂಡಿ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. 2008 ರ ಕೆಎಎಸ್ ಅಧಿಕಾರಿಯಾಗಿರುವ ಅನಿಲ್ ಕುಮಾರ್ ಮೆಕ್ಯಾನಿಕಲ್ ಎಂಜಿನೀಯರಿಂಗ್ ಪದವೀಧರರಾಗಿದ್ದಾರೆ.

SCROLL FOR NEXT