ರಾಜಕೀಯ

ಪರಿಷತ್ ಚುನಾವಣೆ ಬಳಿಕ ರಾಜ್ಯ ಪ್ರವಾಸ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ

Manjula VN

ಹುಬ್ಬಳ್ಳಿ: ವಿಧಾನಪರಿಷತ್ ಚುನಾವಣೆ ಬಳಿಕ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು, ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಹೇಳಿದ್ದಾರೆ.

ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರಾರ್ಥ ಶುಕ್ರವಾರ ನಡೆದ ಜನಸ್ವರಾಜ್ ಸಮಾವೇಶ ಉದ್ಘಾಟಿಸಿ ಯಡಿಯೂರಪ್ಪ ಅವರು ಮಾತನಾಡಿದ್ದಾರೆ.

ಪರಿಷತ್ ಚುನಾವಣೆಯಲ್ಲಿ 18ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಈಗಾಗಲೇ ಗೆದ್ದಾಗಿದೆ. ಈಗ ಚುನಾವಣೆ ನಡೆಯುತ್ತಿರುವ ಗೆಲುವಿನ ಅಂತರ ತಿಳಿದುಕೊಳ್ಳಲು ಮಾತ್ರ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಬಾಗಿ ಪರಿಷತ್ ನಲ್ಲೂ ನಾವು ಬಹುಮತ ಪಡೆಯುತ್ತೇವೆಂದು ಹೇಳಿದರು.

ಪರಿಷತ್ ಚುನಾವಣೆ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಜನಪರ ಯೋಜನೆಗಳೊಂದಿಗೆ ಬಿಜೆಪಿ ಜನರ ವಿಶ್ವಾಸಗಳಿಸಿದೆ. ಪ್ರತಿ ಜಿಲ್ಲೆಗೆ ಭೇಟಿಯಾಗಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಹುರಿದುಂಬಿಸಲಾಗುವುದು. ಈ ಮೂಲಕ ಪಕ್ಷವನ್ನು ಮತಷ್ಟು ಬಲಿಷ್ಠಪಡಿಸಲಾಗುವುದು. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ 140ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಾಗುವುದು ಎಂದು ತಿುಳಿಸಿದರು.

ಚುನಾಯಿತ ಪ್ರತಿನಿಧಿಗಳು ಜನರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಹಾಗಾಗಿ ಜನಪ್ರತಿನಿಧಿಗಳು ಜನರೊಂದಿಗೆ ಇದ್ದು, ಅವರನ್ನು ವಿಶ್ವಾಸಕ್ಕೆ ಪಡೆದು ಪ್ರಮಾಣಿಕತೆಯಿಂದ ಅವರ ಸೇವೆ ಮಾಡಬೇಕು. ಹೋಬಳಿಮಟ್ಟದಿಂದ ಮಹಿಳೆಯರನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಬಳಿಕ ಮಾತನಾಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪಾರ್ಟ್ ಟೈಮ್ ರಾಜಕಾರಣಿ ಎಂದು ಕರೆದರು. ಚುನಾವಣೆಯ ಬಳಿಕ ರಾಹುಲ್ ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದರೆ, ಕಾಂಗ್ರೆಸ್ ಹಗರಣ ರಾಜಕಾರಣ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ

SCROLL FOR NEXT