ರಾಜಕೀಯ

ಶಿವಮೊಗ್ಗ: ಬಿಜೆಪಿ ನಾಯಕನ ಪುತ್ರ ರಾಜಕೀಯಕ್ಕೆ ಎಂಟ್ರಿ; ಕುಟುಂಬ ರಾಜಕಾರಣ ಎಷ್ಟೊಂದು ಸಮೃದ್ಧ!

Srinivas Rao BV

ಶಿವಮೊಗ್ಗ: ಶಿವಮೊಗ್ಗದಲ್ಲಿ ಹಿರಿಯ ಬಿಜೆಪಿ ನಾಯಕ ಡಿಹೆಚ್ ಶಂಕರ ಮೂರ್ತಿ ಅವರ ಪುತ್ರ ಡಿಎಸ್ ಅರುಣ್ ಮುಂಬರುವ ಎಂಎಲ್ ಸಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಜಿಲ್ಲೆಯಿಂದ ಕುಟುಂಬ ರಾಜಕಾರಣಕ್ಕೆ ಎಂಟ್ರಿ ಪಡೆದ ಮೂರನೇ ಬಿಜೆಪಿ ನಾಯಕರಾಗಿದ್ದಾರೆ. 

ಮಾಜಿ ಸಿಎಂ ಯಡಿಯೂರಪ್ಪ, ಪರಿಷತ್ ನ ಸಭಾಪತಿ ಶಂಕರ ಮೂರ್ತಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಶ್ರಮಿಸಿದ್ದರು.

ಬೇರೆಡೆಗಳಲ್ಲಿ ಬಿಜೆಪಿಯ ಪ್ರಮುಖ ಅಜೆಂಡಾ ಹಿಂದುತ್ವವಾಗಿದ್ದರೆ, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಪಕ್ಷದ ಅಜೆಂಡಾದ ಆದ್ಯತೆಯನ್ನು ರೈತರ ಹಿತಾಸಕ್ತಿಯ ಕಡೆಗೆ ತಿರುಗಿಸಿದ್ದರು. 

ಡಿಹೆಚ್ ಶಂಕರ ಮೂರ್ತಿ 30 ವರ್ಷಗಳಿಂದ ಪರಿಷತ್ ಸದಸ್ಯರಾಗಿದ್ದು, 8 ವರ್ಷಗಳಿಂದ ಪರಿಷತ್ ನ ಸಭಾಪತಿಯಾಗಿದ್ದಾರೆ. ಇನ್ನು ನೇರಾ ನೇರ ಮಾತನಾಡುವ ಕೆಎಸ್ ಈಶ್ವರಪ್ಪ, ದೀರ್ಘಾವಧಿಯಿಂದಲೂ ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟುಕೊಂಡು ಪಕ್ಷವನ್ನು ಸಂಘಟಿಸಿದ್ದಾರೆ. 

ಯಡಿಯೂರಪ್ಪ ಅವರ ಪುತ್ರ ಸಂಸದ ಬಿವೈ ರಾಘವೇಂದ್ರ ಮೂರು ಬಾರಿ ಸಂಸದರಾಗಿದ್ದು, ಮಾಜಿ ಶಾಸಕರೂ ಹೌದು. ಅವರ ಮತ್ತೋರ್ವ ಪುತ್ರ ಬಿವೈ ವಿಜಯೇಂದ್ರ, ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದಾರೆ. 

ಈಶ್ವರಪ್ಪ ಅವರ ಪುತ್ರ ಕಾಂತೇಶ್ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಈ ಬಾರಿ ಶಾಸಕ ಸ್ಥಾನಕ್ಕೆ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆದರೆ ತಾವು ಸಚಿವರಾಗಿರುವವರೆಗೂ ತಮ್ಮ ಪುತ್ರನಿಗೆ ಶಾಸಕ ಅಥವಾ ಮೇಲ್ಮನೆ ಸದಸ್ಯನಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಗೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಪಕ್ಷ ಕೊನೆಯ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿತ್ತು. ಡಿಹೆಚ್ ಶಂಕರಮೂರ್ತಿ ಅವರ ಪುತ್ರ ಅರುಣ್, ಕರ್ನಾಟಕ ಆರ್ಯ-ವೈಶ್ಯ ಸಮುದಾಯ ಅಭಿವೃದ್ಧಿ ಕಾರ್ಪೊರೇಷನ್ ನ ಅಧ್ಯಕ್ಷರಾಗಿದ್ದಾರೆ.

SCROLL FOR NEXT