ರಾಜಕೀಯ

ಪಕ್ಕದ ಜಿಲ್ಲೆಯ ನಾಯಕನಿಗೆ ಟಿಕೆಟ್: ಎಂಎಲ್ ಸಿ ಚುನಾವಣೆಯಲ್ಲಿ ಕಾರ್ಯಕರ್ತರ ಆಕ್ರೋಶಕ್ಕೆ ಕಾಂಗ್ರೆಸ್ ಗುರಿ!

Srinivas Rao BV

ಬೆಂಗಳೂರು: ಕೊಡಗಿನಲ್ಲಿ ಪ್ರಾದೇಶಿಕ ಭಾವನೆಗಳು ಗಟ್ಟಿಯಾಗಿರುವುದರ ನಡುವೆಯೂ ಈ ಬಾರಿಯ ಪರಿಷತ್ ಚುನಾವಣೆಗೆ ಅಭ್ಯರ್ಥಿಯ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷ ಎಡವಟ್ಟು ಮಾಡಿಕೊಂಡಿದೆ. 

ಪಕ್ಕದ ಜಿಲ್ಲೆ ಹಾನಸದ ಮಂಥರ್ ಗೌಡ ಗೆ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದನ್ನು ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದಾರೆ. 

ಪಕ್ಷದ ಈ ನಿರ್ಧಾರದ ವಿರುದ್ಧ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಇದರ ಲಾಭ ಪಡಿದಿದ್ದು ಕಾಂಗ್ರೆಸ್ ವಿರುದ್ಧ ವ್ಯಾಪಕ ಟೀಕಾ ಪ್ರಹಾರ ನಡೆಸಿದೆ. 

ಕೊಡಗಿನಲ್ಲಿ ಕಾಂಗ್ರೆಸ್ ಗೆ ಸ್ಥಳೀಯ ನಾಯಕರು ಇಲ್ಲ. ಆದ್ದರಿಂದ ಪಕ್ಕದ ಜಿಲ್ಲೆಯಿಂದ ಆಮದು ಮಾಡಿಕೊಂಡಿದೆ ಎಂದು ಮಡಿಕೇರಿಯ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಟೀಕಿಸಿದ್ದಾರೆ. 

ಬಿಜೆಪಿಗೆ ಜಿಲ್ಲೆಯಲ್ಲಿ 850 ಮತಗಳಿದ್ದರೆ, ಕಾಂಗ್ರೆಸ್ ಗೆ 350 ಮತಗಳಿದ್ದು ಸೋಲಿನ ಸಾಧ್ಯತೆ ಹೆಚ್ಚಾಗಿದೆ. ಹೀಗಿದ್ದರೂ ಮಂಥರ್ ಗೌಡ ಅವರಿಕೆ ಟಿಕೆಟ್ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. 

ಕೊಡಗು ಅಷ್ಟೇ ಅಲ್ಲದೇ ಇತರ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಂದ ತೀವ್ರ ವಿರೋಧ ಎದುರಿಸಿದೆ 

ಬೆಳಗಾವಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಬಸವರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಿರುವುದೂ ಅಸಮಾಧಾನ ಹೊಗೆಯಾಡಲು ಕಾರಣವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ಶಾಸಕಿಯಾಗಿದ್ದಾರೆ. ಇನ್ನೂ ಅವರ ಕುಟುಂಬದವರಿಗೇ ಏಕೆ ಹೆಚ್ಚು ಸ್ಥಾನಗಳನ್ನು ನೀಡಬೇಕು? ಎಂಬುದು ಕಾರ್ಯಕರ್ತರ ಪ್ರಶ್ನೆಯಾಗಿದೆ. 

ಮಂಡ್ಯದಲ್ಲಿ ದಿನೇಶ್ ಗೂಳಿ ಗೌಡಗೆ ಟಿಕೆಟ್ ನೀಡಿರುವುದಕ್ಕೂ ಸ್ಥಳೀಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿಯಲ್ಲಿ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ಅವರೊಂದಿಗೆ ಇದ್ದ ಗೂಳಿ ಗೌಡ ಪಕ್ಷಕ್ಕೆ ಹಿಂಬಾಗಿಲಿಂದ ಬಂದ ವ್ಯಕ್ತಿ ಎಂಬುದು ಇದಕ್ಕೆ ಇರುವ ಪ್ರಮುಖ ಕಾರಣ ಇನ್ನು ಚಿತ್ರದುರ್ಗದ ಅಭ್ಯರ್ಥಿ ಬಿ ಸೋಮಶೇಖರ್ ಅವರೂ ಸ್ಥಳೀಯರಲ್ಲ ಎಂಬ ಆಕ್ಷೇಪ ಕಾರ್ಯಕರ್ತರಲ್ಲಿದೆ. 

SCROLL FOR NEXT