ರಾಜಕೀಯ

ಸಿದ್ದರಾಮಯ್ಯ ಒಬ್ಬ ಡೋಂಘಿ ರಾಜಕಾರಣಿ: ಛಲವಾದಿ ನಾರಾಯಣಸ್ವಾಮಿ

Nagaraja AB

ಬೆಂಗಳೂರು: ಸಂವಿಧಾನ ವಿರೋಧಿಯಾಗಿರುವ ಸಿದ್ದರಾಮಯ್ಯ, ಹೊಟ್ಟೆಪಾಡಿಗಾಗಿ ಕಾಂಗ್ರೆಸ್ ಸೇರಿರುವ ಒಬ್ಬ ಡೋಂಘಿ ರಾಜಕಾರಣಿ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ,ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹಿಂದೆ ಜನತಾದಳದಲ್ಲಿದ್ದಾಗ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಅದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಕಾಂಗ್ರೆಸ್‍ಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ.  ಸಂವಿಧಾನ ವಿರೋಧಿಗಳು ಎಂದು ಮಾತನಾಡಿದ್ದರು ಎಂದರು.

ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದಿರುವ ಸಿದ್ದರಾಮಯ್ಯ, ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದವರು. ಅದಕ್ಕೆ ಮುಂಚೆ ಅವರು ಬೇರೆ ಕಡೆ ಇದ್ದರು. ಇತ್ತೀಚೆಗೆ ಕಾಂಗ್ರೆಸ್ಸನ್ನು ಹೊಗಳಲು ಆರಂಭಿಸಿದ್ದಾರೆ. ಸಂವಿಧಾನವನ್ನೇ ತಿರುಚಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು ಸಿದ್ದರಾಮಯ್ಯ ಒಪ್ಪುತ್ತಾರೆಯೇ? ಎಂದು ಛಲವಾದಿ ನಾರಾಯಣಸ್ವಾಮಿ  ಪ್ರಶ್ನಿಸಿದರು.ಸಿದ್ದರಾಮಯ್ಯ ಬದ್ಧತೆ ಇಲ್ಲದ ಸಮಯ ಸಾಧಕ ರಾಜಕಾರಣಿಯಾಗಿದ್ದು, ಕೇವಲ ಹೊಟ್ಟೆಪಾಡಿಗಾಗಿ ಕಾಂಗ್ರೆಸ್  ಪಕ್ಷ ಸೇರಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ವೇಳೆ ಸಂವಿಧಾನ ದಿನವನ್ನೇ ಕಾಂಗ್ರೆಸ್ ಬಹಿಷ್ಕರಿಸಿದೆ. ಸಿದ್ದರಾಮಯ್ಯ ಅವರು ಸಂವಿಧಾನ ದಿನದ ಬಗ್ಗೆ ಆಕ್ಷೇಪಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಕಾಂಗ್ರೆಸ್ ಪಕ್ಷದವರಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಕಾಂಗ್ರೆಸ್ ನವರು ಗೌರವ ನೀಡಿದವರಲ್ಲ, ದಲಿತರನ್ನು ಕಾಂಗ್ರೆಸ್ ಪಕ್ಷದವರು ಕೇವಲ ಮತ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಂಡವರು ಎಂದು ಟೀಕಾ ಪ್ರಹಾರ ನಡೆಸಿದರು.

SCROLL FOR NEXT