ರಾಜಕೀಯ

ಸಿಂದಗಿ ಉಪಚುನಾವಣೆ: ಟಿಕೆಟ್ ಪಡೆಯುವ ಭರವಸೆಯಲ್ಲಿ ರಮೇಶ್ ಭೂಸನೂರ್: ಹೊಸ ಮುಖದ ಹುಡುಕಾಟದಲ್ಲಿ ಬಿಜೆಪಿ!

Shilpa D

ವಿಜಯಪುರ: ಅಕ್ಟೋಬರ್ 30 ರಂದು ನಡೆಯುವ ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಜೆಡಿಎಸ್ ಶಾಸಕ ಸಿಎಂ ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಎರಡು ಬಾರಿ ಶಾಸಕರಾಗಿದ್ದ ರಮೇಸ್ ಭೂಸನೂರು ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ರಮೇಶ್ ಅವರು 2018 ರ ವಿಧಾನಸಭೆ ಚುನಾವಣೆಯಲ್ಲಿ ಮನಗೂಳಿ ವಿರುದ್ಧ ಕಡಿಮೆ ಅಂತರದಿಂದ ಸೋಲನುಭವಿಸಿದ್ದರು. ಆದರೆ ಬಿಜೆಪಿ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಕೇವಲ ಉಪಚುನಾವಣೆಗಾಗಿ ಪಕ್ಷ ಹೊಸ ಅಭ್ಯರ್ಥಿ ಹುಡುಕಾಟದಲ್ಲಿಲ್ಲ, ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಪಕ್ಷವನ್ನ ಬಲಗೊಳಿಸುವ ನಿಟ್ಟಿನಲ್ಲಿ ಶೋಧ ನಡೆಸುತ್ತಿದೆ. ತಳಮಟ್ಟದಲ್ಲಿ ಕೆಲಸ ಮಾಡುವವರ ಬಗ್ಗೆ ಬಿಜೆಪಿ ಒಲವು ತೋರಿಸುತ್ತಿದೆ.

ಪ್ರಸ್ತುತ, ಬಿಜೆಪಿಯಲ್ಲಿ ಭೂಸನೂರ್, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ್ ಅಲ್ಲಾಪುರಿ ಮತ್ತು ಮಾಜಿ ಕಾರ್ಪೊರೇಟರ್ ರವೀಂದ್ರ ಲೋಣಿ ಸೇರಿದಂತೆ ಎಂಟು ಮಂದಿ ಆಕಾಂಕ್ಷಿಗಳಿದ್ದಾರೆ. "ನಾನು ಕಳೆದ ಮೂರು ದಶಕಗಳಿಂದ ಯಾವುದೇ ನಿರೀಕ್ಷೆಗಳಿಲ್ಲದೆ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕೊಡುಗೆಯನ್ನು ಗುರುತಿಸಿದ ಪಕ್ಷದ ಹೈಕಮಾಂಡ್ ನನ್ನನ್ನು ಲಿಂಬೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಈಗ, ಟಿಕೆಟ್ ಕೇಳುವುದು ನನ್ನ ಹಕ್ಕು. ನನ್ನ ಸೇವೆಗಾಗಿ ಬಿಜೆಪಿ ನನಗೆ ಪ್ರತಿಫಲ ನೀಡಬೇಕು. ಆದಾಗ್ಯೂ, ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಅಲ್ಲಾಪುರ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಭೂಸನೂರ್ ಸತತ ನಾಲ್ಕನೇ ಬಾರಿಗೆ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ. ನಾನು ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಹೈಕಮಾಂಡ್ ಅನ್ನು ಭೇಟಿ ಮಾಡಿದ್ದೇನೆ. 2018 ರಲ್ಲಿ ನಾನು ಕಡಿಮೆ ಅಂತರದಿಂದ ಸೋತಿದ್ದರಿಂದ ನನಗೆ ಟಿಕೆಟ್ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಪಕ್ಷವು ನನ್ನನ್ನು ಕಣಕ್ಕಿಳಿಸದಿದ್ದರೂ, ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಭೂಸನೂರ್ ಸ್ಪಷ್ಟಪಡಿಸಿದ್ದಾರೆ.

ಇಲ್ಲಿಯವರೆಗೆ ನಮ್ಮ ಅಭ್ಯರ್ಥಿ ಯಾರೆಂದು ನಮಗೆ ತಿಳಿದಿಲ್ಲ. ಪಕ್ಷದ ನಿರ್ಧಾರವು ಆಶ್ಚರ್ಯಕರವಾಗಿರಬಹುದು. ಈ ಸಂಬಂಧ ಚರ್ಚೆಗಳು ಇನ್ನೂ ಆರಂಭವಾಗಬೇಕಿದೆ. ಭಾನುವಾರ ನಡೆಯುವ  ಕೋರ್ ಕಮಿಟಿ ಸಭೆಯಲ್ಲಿ ಇದನ್ನು ಚರ್ಚಿಸಲಾಗುವುದು ಎಂದು ಎಂಎಲ್‌ಸಿ ಅರುಣ್ ಶಹಾಪುರ ತಿಳಿಸಿದ್ದಾರೆ.

ನಾವು ಎಂಟು ಹೆಸರುಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದೇವೆ. ಅದರಲ್ಲಿ ರಮೇಶ್ ಭೂಸನೂರ್ ಮಾತ್ರ ಹಳೆಯ ಮುಖ. ಸಿಂದಗಿ ಕ್ಷೇತ್ರದ ಅಭ್ಯರ್ಥಿಯನ್ನು ಒಂದೆರಡು ದಿನದಲ್ಲಿ ಘೋಷಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕುಚಬಲ್ ಹೇಳಿದರು.

SCROLL FOR NEXT