ರಾಜಕೀಯ

'ಕಾಂಗ್ರೆಸ್‌ನಲ್ಲೂ ಅಲ್ಪ ಸಂಖ್ಯಾತರಿಗೆ ಸ್ಥಾನ ಮಾನವಿಲ್ಲ': ಇಬ್ರಾಹಿಂ ಹೇಳಿಕೆ ಮುಂದಿಟ್ಟು ಕಾಂಗ್ರೆಸ್ ಬದ್ಧತೆ ಪ್ರಶ್ನಿಸಿದ ಬಿಜೆಪಿ

Manjula VN

ಬೆಂಗಳೂರು: ಕಾಂಗ್ರೆಸ್‌ನಲ್ಲೂ ಅಲ್ಪ ಸಂಖ್ಯಾತರಿಗೆ ಸ್ಥಾನ ಮಾನವಿಲ್ಲ ಎಂಬ ವಿಧಾನ ಪರಿಷತ್‌ ಸದಸ್ಯ ಸಿ.ಎಂ ಇಬ್ರಾಹಿಂ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಬದ್ಧತೆ ಕುರಿತು ಪ್ರಶ್ನೆ ಮಾಡಿದ್ದಾರೆ. 

ಇಬ್ರಾಹಿಂ ಅವರ ಟೀಕೆಯ ವೀಡಿಯೋಗಳ ಮೂಲಕ ಕಾಂಗ್ರೆಸ್‌ ಅನ್ನು ಹಣಿದಿರುವ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ. 

‘ಸೋತ ಪರಮೇಶ್ವರ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ, ಉಪ ಮುಖ್ಯಮಂತ್ರಿ ಮಾಡಲಾಗುತ್ತದೆ. ಆದರೆ, ಯಾವುದೇ ಮುಸ್ಲಿಮರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿಲ್ಲ, ಡಿಸಿಎಂ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಈಗ ನಾಯಕರೆಂದು ಇರುವವರು ಡಿ.ಕೆ ಶಿವಕುಮಾರ್‌, ಸಿದ್ದರಾಮಯ್ಯ, ಖರ್ಗೆ ಮಾತ್ರ. ಅಲ್ಪಸಂಖ್ಯಾತರು ಯಾರೂ ಇಲ್ಲವೇ?’ ಎಂದು ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್‌ ಅನ್ನು ಪ್ರಶ್ನೆ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಹಂಚಿಕೊಂಡಿದೆ. 

’ದಶಕಗಳಿಂದ ಅಲ್ಪಸಂಖ್ಯಾತರ ಮುಂಗೈಗೆ ಬೆಲ್ಲ ಸವರುತ್ತಲೇ ಬಂದ ಕಾಂಗ್ರೆಸ್ಸಿಗರೇ, ಸಿ.ಎಂ.ಇಬ್ರಾಹಿಂ ಅವರ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?’ ಎಂದು ಕೇಳಿದೆ. 

‘ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರ ಮೇಲೆ ಹೊಂದಿರುವ ಪ್ರೀತಿಯ ನಿಜಬಣ್ಣವನ್ನು ಇಬ್ರಾಹಿಂ ಬೆತ್ತಲಾಗಿಸಿದ್ದಾರೆ. ಅಲ್ಪಸಂಖ್ಯಾತರನ್ನು ಮತಬ್ಯಾಂಕ್‌ಗಷ್ಟೇ ಸೀಮಿತಗೊಳಿಸಿದ ಕಾಂಗ್ರೆಸ್‌ ಪಕ್ಷಕ್ಕೆ, ಕಾಂಗ್ರೆಸ್‌ ನಾಯಕ ಸಿ.ಎಂ. ಇಬ್ರಾಹಿಂ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೆ?...ಗಾಜಿನ ಮನೆಯಲ್ಲಿ ಕುಳಿತಿರುವ ಕಾಂಗ್ರೆಸ್ಸಿಗರು ಇಬ್ರಾಹಿಂ ಅವರ ಪ್ರಶ್ನೆಗೆ ಮೊದಲು ಉತ್ತರ ನೀಡುವರೇ?..ಸೋತ ಸಿದ್ದರಾಮಯ್ಯ ವಿಪಕ್ಷ ನಾಯಕ, ಸೋತ ಪರಮೇಶ್ವರ ಸಚಿವ, ಸೋತ ಖರ್ಗೆಗೆ ರಾಜ್ಯಸಭಾ ಸ್ಥಾನ. ಆದರೆ, ಮುಸ್ಲಿಮರಿಗೆ ಏನು? ನೆರೆಮನೆಯ ದುಃಖಕ್ಕೆ ಅಳುವವರನ್ನು ಜಗತ್ತು ಮೆಚ್ಚುವುದೇ? ಎಂದು ಪ್ರಶ್ನಿಸಿದೆ.

SCROLL FOR NEXT