ರಾಜಕೀಯ

ಕೆಪಿಸಿಸಿ ಕಚೇರಿಯಲ್ಲೇ ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರ ಆರೋಪ; ಡಿಕೆಶಿ ಮುಖ್ಯಮಂತ್ರಿ ಕನಸಿಗೆ ಸ್ವಪಕ್ಷೀಯರಿಂದಲೇ ಎಳ್ಳುನೀರು: ಬಿಜೆಪಿ ವ್ಯಂಗ್ಯ

Sumana Upadhyaya

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಲಂಚ, ಭ್ರಷ್ಟಾಚಾರದ ಟೀಕೆಯ ರೀತಿಯ ಹೇಳಿಕೆಗಳನ್ನು ಕೆಪಿಸಿಸಿ ಕಚೇರಿಯಲ್ಲಿ ಅವರದ್ದೇ ಪಕ್ಷದ ಇಬ್ಬರು ನಾಯಕರು ಹೇಳಿದ್ದು ಬಯಲಾಗುತ್ತಿದ್ದಂತೆ ಬಿಜೆಪಿ ಡಿ ಕೆ ಶಿವಕುಮಾರ್ ವಿರುದ್ಧ ಟೀಕೆ ಮಾಡಿದೆ. 

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ನಿಮ್ಮದೇ ಪಕ್ಷದ ನಾಯಕರಾದ ವಿ ಎಸ್ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ? ಎಂದು ಪ್ರಶ್ನೆ ಮಾಡಿದೆ.

ಮುಂದುವರಿದು ಟ್ವೀಟ್ ಮೂಲಕ ತಿವಿದಿರುವ ಬಿಜೆಪಿ, ಮುಖ್ಯಮಂತ್ರಿಯಾಗುವ ನಿಮ್ಮ ಕನಸಿಗೆ ನಿಮ್ಮದೇ ಪಕ್ಷದ ನಾಯಕರು ಎಳ್ಳು ನೀರು ಬಿಡುತ್ತಿದ್ದಾರೆ. ನಿಮ್ಮ ಅಧ್ಯಕ್ಷಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ವಪಕ್ಷೀಯರೇ ಷರಾ ಬರೆದಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ "ಡಿಕೆಶಿ ಪದಚ್ಯುತಿ" ಎಂಬ ಮಾಸ್ಟರ್‌ ಪ್ಲ್ಯಾನ್‌ನ ಭಾಗವೇ? ಎಂದು ವ್ಯಂಗ್ಯವಾಡಿದೆ.

ನಿಮ್ಮ ಮೇಲೆ ಎದ್ದಿರುವ ಭ್ರಷ್ಟಾಚಾರ, ಹಗರಣ ಅನುಮಾನಗಳಿಗೆ ಉತ್ತರ ಕೊಡಿ ಎಂದು ಬಿಜೆಪಿ ಒತ್ತಾಯಿಸಿದೆ. 

SCROLL FOR NEXT