ರಾಜಕೀಯ

ಡಿಕೆಶಿ ಬಗ್ಗೆ ಬೇರೆಯವರು ಮಾಡುತ್ತಿರುವ ಆರೋಪದ ಬಗ್ಗೆ ಸಲೀಂ ನನ್ನಲ್ಲಿ ಹೇಳಿದರು ಅಷ್ಟೆ; ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ: ವಿ.ಎಸ್. ಉಗ್ರಪ್ಪ

Sumana Upadhyaya

ಬೆಂಗಳೂರು: ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇಲ್ಲ, ನಾವೆಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ ಜಿ ಪರಮೇಶ್ವರ್ ಸೇರಿದಂತೆ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಕಾಂಗ್ರೆಸ್ ನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಹೇಳಿದ್ದಾರೆ.

ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಅವರ ಜೊತೆ ಕೆಪಿಸಿಸಿ ಕಚೇರಿಯ ವೇದಿಕೆಯಲ್ಲಿ ನಿನ್ನೆ ಸುದ್ದಿಗೋಷ್ಠಿಗೆ ಮುನ್ನ ಅನಧಿಕೃತವಾಗಿ ಡಿ ಕೆ ಶಿವಕುಮಾರ್ ಬಗ್ಗೆ ಮಾತನಾಡಿ ಉಂಟಾದ ಸ್ಫೋಟಕ ವಿವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದರು.

ಡಿ ಕೆ ಶಿವಕುಮಾರ್ ಅವರು ನಮ್ಮ ಕೆಪಿಸಿಸಿ ಅಧ್ಯಕ್ಷರು, ರಾಜ್ಯದಲ್ಲಿ ಡಿ ಕೆಶಿ ಜನಪರ ಕಾಳಜಿ ಹೊಂದಿರುವ ವ್ಯಕ್ತಿ, ಅವರನ್ನು ನಾಲ್ಕು ದಶಕಗಳಿಂದ ಬಲ್ಲೆ, ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ನನ್ನ ಕ್ಷೇತ್ರ ಪಾವಗಡದಲ್ಲಿ ಹಿಂದೆ ವಿದ್ಯುತ್ ಪ್ರಾಜೆಕ್ಟ್ ಒಂದನ್ನು ಮಾಡಿಸಲು ಬಹಳಷ್ಟು ಸಹಾಯ ಮಾಡಿದ್ದರು. ಅದಕ್ಕೆ ಮುಖ್ಯ ಕಾರಣ ಡಿ ಕೆ ಶಿವಕುಮಾರ್. ಅವರು ಇಂಧನ ಇಲಾಖೆಯಲ್ಲಿ ಮತ್ತು ನೀರಾವರಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಡಿ ಕೆ ಶಿವಕುಮಾರ್ ಎಂದಿಗೂ ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ, ಡಿ ಕೆ ಶಿವಕುಮಾರ್ ಗೂ ಭ್ರಷ್ಟಾಚಾರಕ್ಕೂ ಬಹಳ ದೂರ, ರಾಜಕಾರಣದಲ್ಲಿ ಅವರು ಎಂದಿಗೂ ಆಸ್ತಿ, ಹಣ ಗಳಿಸಿಲ್ಲ, ಬದಲಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಭ್ರಷ್ಟಾಚಾರ, ಹಗರಣ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಡಿ ಕೆ ಶಿವಕುಮಾರ್ ಗೂ ದೂರ. ಸಲೀಂ ಅವರು ಹೇಳಿದ್ದು ಅವರ ಹೇಳಿಕೆಯಲ್ಲ, ಬೇರೆಯವರು ಹೇಳಿದ್ದನ್ನು ನನ್ನ ಕಿವಿಯಲ್ಲಿ ಪತ್ರಿಕಾಗೋಷ್ಠಿ ಆರಂಭಕ್ಕೆ ಮುನ್ನ ಹೇಳಿದರು ಅಷ್ಟೆ, ಅದನ್ನು ಮಾಧ್ಯಮಗಳಲ್ಲಿ ವೈಭವೀಕರಿಸುವ ಅಗತ್ಯವಿಲ್ಲ ಎಂದರು. 

ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಅವರು ನೀರಾವರಿ ಇಲಾಖೆ ಹಗರಣ ವಿಚಾರವನ್ನು ಪ್ರಸ್ತಾಪಿಸಿದರು. ಜನ ಮತ್ತು ಬಿಜೆಪಿ ನಾಯಕರು ಹೀಗೆ ಮಾತನಾಡುತ್ತಿದ್ದಾರೆ, ಡಿಕೆಶಿ ಮೇಲೆ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಎಂದು ಸಲೀಂ ಅವರು ನನ್ನ ಕಿವಿಯಲ್ಲಿ ಇಂದು ಪಿಸುಗುಟ್ಟಿದರು. ಸುದ್ದಿಗೋಷ್ಠಿ ಬಗ್ಗೆ ಸಲೀಂ ಅವರಿಗೆ ಬುದ್ದಿಮಾತು ಹೇಳಿದ್ದೆ. ಈ ವಿಚಾರವನ್ನು ಮಾಧ್ಯಮಗಳು ವೈಭವೀಕರಿಸಿ ತಪ್ಪಾಗಿ ಅರ್ಥೈಸಿಕೊಂಡು ಬಿಜೆಪಿಯವರು ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

SCROLL FOR NEXT