ರಾಜಕೀಯ

ಆರ್ ಎಸ್ ಎಸ್ ಬಗ್ಗೆ ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಮನಬಂದಂತೆ ಮಾತನಾಡುವುದು ಸರಿಯಲ್ಲ: ಬಿ ಎಸ್ ಯಡಿಯೂರಪ್ಪ 

Sumana Upadhyaya

ವಿಜಯಪುರ: ಆರ್ ಎಸ್ ಎಸ್ ಬಗ್ಗೆ ರಾಜಕೀಯ ನಾಯಕರು ಹಗುರವಾಗಿ, ಮನಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ವಿಜಯಪುರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಜನರ ಮುಂದೆ ಇನ್ನಷ್ಟು ಚಿಕ್ಕವರಾಗುತ್ತಾರೆ. ಮಾಜಿ ಮುಖ್ಯಮಂತ್ರಿಗಳಾಗಿ ಅವರ ಘನತೆ, ಗೌರವಕ್ಕೆ ಶೋಭೆ ತರುವ ವಿಚಾರವಲ್ಲ ಇದು ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ಅವರಿಗೇನು ಗೌರವ ಬರುವುದಿಲ್ಲ, ಪಶ್ಚಾತ್ತಾಪ ಪಡಬೇಕಾಗುತ್ತದೆ. ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ಅದರಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.

ತಮ್ಮ ಆಪ್ತರ ಮೇಲೆ ಐಟಿ ದಾಳಿ ನಡೆದಿದ್ದು, ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲು, ಕಟ್ಟಿಹಾಕಲು ನಡೆಸುತ್ತಿರುವ ಯತ್ನ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಐಟಿ ದಾಳಿ ಎಲ್ಲಿ ನಡೆದಿದೆ, ಇದರಲ್ಲಿ ಏನೂ ಸತ್ಯಾಂಶವಿಲ್ಲ. ಉಮೇಶ್ ಅವರ ಮನೆಯ ಮೇಲೆ ಆದ ತಕ್ಷಣ ಏನಾದರೂ ಪುರಾವೆಗಳು ಸಿಕ್ಕಿವೆಯೇ, ಸಾಬೀತಾಗಿವೆಯೇ ಈ ಆರೋಪದಲ್ಲಿ ಹುರುಳಿಲ್ಲ ಎಂದರು.

ಭಾರತೀಯ ಜನತಾ ಪಾರ್ಟಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ, ಮುಂದಿನ ಬಾರಿ ಕೂಡ ಅವರೇ ಪ್ರಧಾನಿಯಾಗಬೇಕೆಂಬುದು ನಮ್ಮ ಅಪೇಕ್ಷೆ. ಲೋಕಸಭೆಯಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಬೇಕು, ಗ್ರಾಮ ಪಂಚಾಯತ್ ನಿಂದ ಹಿಡಿದು ಮುಂದಿನ ಎಲ್ಲ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. 

SCROLL FOR NEXT