ರಾಜಕೀಯ

ಅವರು ಮಾತಿನಲ್ಲೇ ಮಂಟಪ ಕಟ್ಟಿಸುತ್ತಿದ್ದಾರೆ: ಸಿದ್ದರಾಮಯ್ಯಗೆ ಪಂಥಾಹ್ವಾನ ವಿಚಾರಕ್ಕೆ ಸಿಎಂ ತಿರುಗೇಟು

Manjula VN

ಹಾವೇರಿ: ಅವರು ಮಾತಿನಲ್ಲೇ ಮಂಟಪ ಕಟ್ಟಿಸುತ್ತಿದ್ದಾರೆ. ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪಂಥಾಹ್ವಾನ ವಿಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ತಿರುಗೇಟು ನೀಡಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ತ ಹಾನ್​ಗಲ್​​ನಲ್ಲಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲೇ ನಾವು ಬಹಿರಂಗ ಸವಾಲು ಹಾಕಿದೀವಿ. ಮತ್ತೇನು ಸವಾಲು ಹಾಕೋದಿದೆ. ಅವರು ಬರೀ ಮಾತಿನ ಮಂಟಪ ಕಟ್ಟಬೇಕಂತಾರೆ. ಅದಕ್ಕೂ ಮುಂಚೆ ಅವರು ನಾವೇನು ಕೆಲಸ ಮಾಡಿದ್ದೇವಂತ ಬಂದು ನೋಡಲಿ. ಅದನ್ನ ಬಿಟ್ಟು ಅವರ ಬೆಂಬಲಿಗರ ಮಾತು ಕೇಳಿಕೊಂಡು ಮಾತಾಡೋದು ಸರಿಯಲ್ಲ. ನಾವು ಏನು ಮಾಡಿದ್ದೇವೆ ಅನ್ನೋದನ್ನ ನಿನ್ನೆ ದಾಖಲೆಗಳ ಸಮೇತ ಹೇಳಿದ್ದೇನೆ. ಕೆಲವು ಊರುಗಳ ಹೆಸರುಗಳನ್ನೂ ಹೇಳಿದ್ದೇನೆ. ಅಲ್ಲಿಗೆ ಹೋಗಿ ನೋಡಿಕೊಂಡು ಬರಲಿ ಎಂದು ಹೇಳಿದರು.

ಬಿಜೆಪಿ‌ ಸೋಲಿನ ಭೀತಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಪ್ರಚಾರಕ್ಕೆ ಕರೆಸಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಹಾಗಾದ್ರೆ ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಅವರನ್ನ ಕ್ಷೇತ್ರಕ್ಕೆ ಮತ್ತೆ ಕರೆಸಿದ್ರಾ ಕಾಂಗ್ರೆಸ್​​ನವರು ಎಂದು ಪ್ರಶ್ನಿಸಿದ್ದಾರೆ.

ಬಿಎಸ್​ವೈ ಆಗಮನದಿಂದ ನಮ್ಮ ಬಲ ಇಮ್ಮಡಿಯಾಗಿದೆ. ನಮ್ಮ ಗೆಲುವಿನ ಅಂತರ ಕೂಡ ಇಮ್ಮಡಿಯಾಗಿದೆ ಎಂದು ತಿಳಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರದ ವೇಳೆ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ನಾನು ಮಾತಾಡಲ್ಲ. ಹಾನಗಲ್ ಕ್ಷೇತ್ರದಲ್ಲಂತೂ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SCROLL FOR NEXT