ರಾಜಕೀಯ

ಸಿಂದಗಿ-ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ, ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣ 

Sumana Upadhyaya

ಬೆಂಗಳೂರು: ರಾಜ್ಯದ ಪ್ರಮುಖ ಮೂರು ಪಕ್ಷಗಳಿಗೆ ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಬುಧವಾರ ಸಾಯಂಕಾಲ 7 ಗಂಟೆಗೆ ತೆರೆ ಬೀಳಲಿದೆ.

ಮೂರೂ ಪಕ್ಷಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಇದು ಪ್ರತಿಷ್ಠೆಯ ಕಣವಾಗಿರುವುದರಿಂದ ಪ್ರಮುಖ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಬಿರುಸಿನ ಪ್ರಚಾರ ಮಾಡಿದ್ದರು. ಪ್ರಚಾರ ವೇಳೆ ಆರೋಪ-ಪ್ರತ್ಯಾರೋಪ, ವಾಕ್ಸಮರಗಳಿಗೂ ವೇದಿಕೆ ಸಾಕ್ಷಿಯಾಯಿತು. 

ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿಯವರಿಗೆ ಇದು ಅಗ್ನಿಪರೀಕ್ಷೆಯ ಉಪ ಚುನಾವಣೆ, ಹೀಗಾಗಿ ನಿನ್ನೆಯವರೆಗೂ ಎರಡೂ ಕ್ಷೇತ್ರಗಳಲ್ಲಿ ತೀವ್ರ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಮತದಾರರ ಮನಗೆಲ್ಲಲು ಹಲವು ತಂತ್ರಗಳನ್ನು ಹೆಣೆದಿದ್ದಾರೆ. ಇನ್ನು ಕಾಂಗ್ರೆಸ್ ನಿಂದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಘಟನುಘಟಿ ನಾಯಕರು ಕ್ಷೇತ್ರಗಳಿಗೆ ಬಂದು ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ನಿಂದ ಸ್ವತಃ ಹೆಚ್ ಡಿ ದೇವೇಗೌಡರೇ ಅಖಾಡಕ್ಕಿಳಿದಿದ್ದಾರೆ. ಹೆಚ್ ಡಿ ಕುಮಾರಸ್ವಾಮಿಯವರು ಕೂಡ ತಮ್ಮ ಅಭ್ಯರ್ಥಿಗಳ ಪರವಾಗಿ ಮತದಾರರನ್ನು ಜೆಡಿಎಸ್ ನತ್ತ ಒಲಿಸಿಕೊಳ್ಳಲು ನಾನಾ ತಂತ್ರಗಾರಿಕೆ ರೂಪಿಸಿದ್ದಾರೆ.

ಕಳೆದ ಅಕ್ಟೋಬರ್ 13ರಿಂದ ರಾಜ್ಯದ ಎಲ್ಲ ಪಕ್ಷಗಳ ಘಟಾನುಘಟಿ ನಾಯಕರು ಸರತಿಯಲ್ಲಿ ಎರಡೂ ಕ್ಷೇತ್ರಗಳಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇಂದು ಕೊನೆಯ ಸುತ್ತಿನಲ್ಲಿ ನಾಯಕರು ಮತದಾರರ ಮನವೊಲಿಸಲು ಇನ್ನಷ್ಟು ತಂತ್ರಗಳನ್ನು ಹೆಣೆಯಬಹುದು. ಇಂದು ಸಂಜೆ 7 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ನಂತರ ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಪ್ರಚಾರ ನಡೆಸಬಹುದು. ಅಭ್ಯರ್ಥಿಗಳು, ಸ್ಥಳೀಯ ಮತದಾರರು ಬಿಟ್ಟರೆ ಬೇರೆ ಯಾರೂ ಇನ್ನು ಚುನಾವಣೆ ನಡೆಯುವವರೆಗೆ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. 

ಈ ಮೂಲಕ ಹದಿನೈದು ದಿನಗಳ ರಾಜಕೀಯ ನಾಯಕರ ಪ್ರಚಾರದ ಭರಾಟೆ, ಮಾತಿನ ಸಮರ, ಏಟಿಗೆ ಎದಿರೇಟು, ವಾಗ್ಬಾಣಗಳಿಗೆ ಇಂದು ಸಂಜೆ ತೆರೆ ಬೀಳಲಿದೆ. 

SCROLL FOR NEXT