ಬೆಂಗಳೂರು: ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನಯೇ ಇಲ್ಲ, ಯಾರನ್ನೂ ರಕ್ಷಣೆ ಮಾಡುವ ಅವಶ್ಯಕತೆಯೂ ಇಲ್ಲ, ಡ್ರಗ್ಸ್ ಪ್ರಕರಣ, ಅಕ್ರಮ ಹಣ ವರ್ಗಾವಣೆ ಕೇಸುಗಳಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ, ಕೇಂದ್ರದ ತನಿಖಾ ಸಂಸ್ಥೆಗಳು ನಿರಂತರವಾಗಿ ತನಿಖೆ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಲ್ಲದೆ ಸುದೀರ್ಘವಾಗಿ ಮಾತನಾಡಿದ್ದಾರೆ. ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಬರುತ್ತಿದ್ದು ಇದು ಕಳವಳಕಾರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಈ ಬಗ್ಗೆ ಇಂದು ಸಿಎಂ ಸ್ಪಷ್ಟನೆ ನೀಡಿರುವುದಲ್ಲದೆ ವಿಪಕ್ಷ ನಾಯಕರಿಗೆ ತಿರುಗೇಟು ನೀಡುವ ಮತ್ತು ಜನರಿಗೆ ಮನದಟ್ಟಾಗುವಂತೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.
ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡೂ ಕಡೆ ಅಭೂತಪೂರ್ವವಾದ ಯಶಸ್ಸು ನಮಗೆ ಸಿಗುವ ವಿಶ್ವಾಸವಿದೆ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ಕಾಂಗ್ರೆಸ್ ನವರು ಈಗಲೇ ಸೋಲಿನ ಭಯದಿಂದ ನಮ್ಮ ಮೇಲೆ ವೃಥಾ ಆರೋಪಗಳನ್ನು ಮಾಡಲು ನೆಪಗಳನ್ನು ಹುಡುಕುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸೋಲಿನ ಭೀತಿಯಿಂದ ಹತಾಶರಾಗಿ ಬಿಜೆಪಿ ವಿರುದ್ಧ ಟೀಕೆಗಳನ್ನು ಮತ್ತು ಆರೋಪಗಳನ್ನು ಮಾಡಲು ಈಗಲೇ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಬಿಟ್ ಕಾಯಿನ್ ಹಗರಣದ ವಿಚಾರವನ್ನು ಮುಂದಿಟ್ಟುಕೊಂಡು ಆ ಕೆಲಸ ಮಾಡುತ್ತಿದ್ದಾರೆ.
ಬಿಟ್ ಕಾಯಿನ್ ಹಗರಣದ ತನಿಖೆ ಬಗ್ಗೆ ಗೃಹ ಸಚಿವರು ನೀಡಿರುವ ಹೇಳಿಕೆ ಸರಿಯಿದೆ, ಇದರಲ್ಲಿ ಗೊಂದಲವಿಲ್ಲ. ಡ್ರಗ್ ಮೇಲೆ ನಾವು ಯುದ್ಧವನ್ನೇ ಘೋಷಿಸಿದ್ದೇವೆ. ಕಳೆದ ಎರಡೂವರೆ ವರ್ಷದಿಂದ ಹಿಂದೆಂದೂ ಕಾಣದಿರುವಂತಹ ಡ್ರಗ್ ಕೇಸುಗಳನ್ನು ನಮ್ಮ ಸರ್ಕಾರದಡಿ ಭೇದಿಸಲಾಗಿದೆ. ಅತಿ ಹೆಚ್ಚು ಡ್ರಗ್ ಗಳನ್ನು ವಶಪಡಿಸಿಕೊಂಡಿದ್ದೇವೆ. ಅದರಲ್ಲಿ ಶೇಕಡಾ 50ರಷ್ಟು ನಾಶಮಾಡಿ ಎನ್ ಡಿಪಿಎಸ್ ಕಾಯ್ದೆಯಡಿ ಕಾನೂನು ಶಿಕ್ಷೆಯಿಂದ ಅಪರಾಧಿಗಳು ತಪ್ಪಿಸಿಕೊಳ್ಳದಂತೆ ಶಿಕ್ಷೆ ಕೊಡಿಸಲು ಎಲ್ಲಾ ಕ್ರಮಗಳನ್ನು ಜರುಗಿಸಲಾಗಿದೆ.
ಪ್ರಥಮ ಬಾರಿಗೆ ಮಾದಕ ವಸ್ತುಗಳ ವಿರುದ್ಧ ಹೋರಾಟ ಕರ್ನಾಟಕದಿಂದ ಪ್ರಾರಂಭವಾಗಿದೆ. ಅದು ಮುಂದೆ ಕೂಡ ಮುಂದುವರಿಯುತ್ತದೆ ಎಂದರು.
ಕೆಲವು ಯುವ ಜನಾಂಗ ಹೊರಗಿನಿಂದ ತಂದು ಡ್ರಗ್ ಸೇವನೆ ಮಾಡುವ ಮತ್ತು ವಿತರಿಸುವ ಕೆಲಸದಲ್ಲಿ ತೊಡಗಿದ್ದು , ಅದರಲ್ಲಿ ಶ್ರೀಕೃಷ್ಣ ಎನ್ನುವವನು 2018ರ ಫೆಬ್ರವರಿಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಕೇಸು ಆಗಿದ್ದು, ಅದರಲ್ಲಿ ಶ್ರೀಕೃಷ್ಣ ಆರೋಪಿ, ಆತನನ್ನು ಬಂಧಿಸದೆ ಆತನ ಜೊತೆಗಿದ್ದ 6 ಮಂದಿಯನ್ನು ಬಂಧಿಸಲಾಗಿತ್ತು. ಅವನಿಗೆ ನಿರೀಕ್ಷಣಾ ಜಾಮೀನುವರಗೆ ಅವಕಾಶ ಸಿಕ್ಕಿತ್ತು. ಅದಾದ ಮೇಲೆ ಆತನನ್ನು ಯುಬಿ ಸಿಟಿ ದಾಂಧಲೆಯಲ್ಲಿ ಬಂಧಿಸಿ ಸಂಪೂರ್ಣ ತನಿಖೆ ಮಾಡಬೇಕಾಗಿತ್ತು. ಇಂದು ನಮ್ಮ ಮೇಲೆ ಆರೋಪ ಮಾಡುವ ಗೂಬೆ ಕೂರಿಸುವ ಕಾಂಗ್ರೆಸ್ ನಾಯಕರು ಅಂದೇಕೆ ಆ ಕ್ರಮಕ್ಕೆ ಮುಂದಾಗಿರಲಿಲ್ಲ. 2018ರ ಫೆಬ್ರವರಿಯಲ್ಲಿ ಯಾರ ಸರ್ಕಾರವಿತ್ತು ಎಂದು ಸಿಎಂ ಪ್ರಶ್ನಿಸಿದ್ದಾರೆ.
2020ರಲ್ಲಿ ಒಂದು ಕೇಸಲ್ಲಿ ಡ್ರಗ್ ಕೇಸಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಕೂಡಲೇ ಬಂಧಿಸಲಾಯಿತು. ಪ್ರಭಾವಿತರನ್ನು ಬಂಧಿಸಿ ತನಿಖೆ ಮಾಡುವ ಸಂದರ್ಭದಲ್ಲಿ ಶ್ರೀಕೃಷ್ಣನ ಬಗ್ಗೆ ಆತ ಅಕ್ರಮ ಚಟುವಟಿಕೆಗಳನ್ನು ಹ್ಯಾಕಿಂಗ್, ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಮೂರು ಕೇಸಲ್ಲಿ ದಾಖಲು ಮಾಡಿ ತನಿಖೆ ನಡೆಸಿ ಆರೋಪಪಟ್ಟಿ ಕೂಡ ಆಗಿದೆ.ಕಳೆದ ಮಾರ್ಚ್ ತಿಂಗಳಲ್ಲಿ ಇಡಿಗೆ ಕೇಸನ್ನು ಉಲ್ಲೇಖಿಸಿದ್ದು, ಅವರು ಕೂಡ ಕೇಸು ದಾಖಲಿಸಿ ಈಗ ತನಿಖೆಯಾಗುತ್ತಿದೆ. 2019ರಲ್ಲಿ ಇಪೋರ್ಟಲ್ ನ್ನು ಹ್ಯಾಕ್ ಮಾಡಿದ್ದಕ್ಕೆ ಸಿಐಡಿ ಕೇಸು ದಾಖಲಿಸಿ ಆ ಕೇಸು ಕೂಡ ತನಿಖೆಯಾಗಿದೆ. ವಿದೇಶದಲ್ಲಿರುವ ಇಂಟರ್ ಪೋಲ್ ನವರು ಸ್ಪಷ್ಟೀಕರಣ ಕೇಳಿದ್ದು ಅದರಲ್ಲಿ ಕೂಡ ನಾವು ಸ್ಪಷ್ಟನೆ ನೀಡಿ ಕೇಸು ದಾಖಲಿಸಲಾಗಿದೆ ಎಂದು ಸಿಎಂ ಹೇಳಿದರು.
ಶ್ರೀಕೃಷ್ಣನನ್ನು ಬಂಧಿಸಿ ಕೇಸುಗಳ ಬಗ್ಗೆ ಸರಿಯಾದ ತನಿಖೆಯನ್ನು ಬಿಜೆಪಿ ಸರ್ಕಾರದಲ್ಲಿ ಮಾಡಲಾಗುತ್ತಿದೆ. ಮೂರು ಕೇಸುಗಳನ್ನು ದಾಖಲಿಸಿ ತನಿಖೆ ನಡೆಸಿ ಆರೋಪಪಟ್ಟಿಯನ್ನು ಕೂಡ ಬಿಜೆಪಿ ಸರ್ಕಾರ ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ, ಹ್ಯಾಕಿಂಗ್ ಮತ್ತು ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ಕೇಸು ದಾಖಲಿಸಿದ್ದೇವೆ. ಇಡಿ, ಸಿಬಿಐಗೆ ಉಲ್ಲೇಖಿಸಿದೆ, ನಮ್ಮ ಸರ್ಕಾರ ಈ ವಿಷಯದಲ್ಲಿ ಸಂಧಾನ ಮಾಡುವ ಪ್ರಶ್ನೆಯೇ ಇಲ್ಲ, ಇಲ್ಲಿ ಅವ್ಯವಹಾರವಾಗಿದೆ ಎಂದು ಹೇಳುವ ವಿಪಕ್ಷ ನಾಯಕರು ಸಾಕ್ಷಿ, ಆಧಾರಗಳನ್ನು ನೀಡಲಿ ಎಂದು ಸಿಎಂ ಬೊಮ್ಮಾಯಿ ಒತ್ತಾಯಿಸಿದರು.
ಡ್ರಗ್ಸ್, ಡಾರ್ಕ್ ವೆಬ್ ಹ್ಯಾಕಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ, ಬಿಟ್ ಕಾಯಿನ್ ವಹಿವಾಟಿನಲ್ಲಿ ಯಾರೇ ಅಕ್ರಮ ಮಾಡಿದ್ದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಕಾನೂನಿನಡಿಯಲ್ಲಿ ತಂದು ಶಿಕ್ಷೆ ಕೊಡಿಸುವ ಪ್ರಯತ್ನ ಸರ್ಕಾರ ಮಾಡುತ್ತದೆ ಎಂದರು.
ಕಾಂಗ್ರೆಸ್ ನವರು ಸಂಪೂರ್ಣವಾಗಿ ಮಾಹಿತಿ ತರಿಸಿಕೊಳ್ಳಲಿ, ಯಾವ ಸರ್ಕಾರದಲ್ಲಿ, ಯಾರ ಆಡಳಿತದಲ್ಲಿ ಏನೇನು ಆಗಿದೆ, ತನಿಖೆಯಾಗಿದೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದ ನಾಯಕರು ವಿವರ ತರಿಸಿಕೊಳ್ಳಲಿ, ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲ: ಬಿಟ್ ಕಾಯಿನ್ ಸೇರಿದಂತೆ ಅಕ್ರಮ ಹಣ ವರ್ಗಾವಣೆ, ಹ್ಯಾಕಿಂಗ್ ಪ್ರಕರಣದಲ್ಲಿ ಅವ್ಯವಹಾರವಾಗಿದೆ, ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ, ಆರೋಪಿಗಳ ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ ಎನ್ನುವ ಸಿದ್ದರಾಮಯ್ಯನವರಲ್ಲಿ ಸಾಕ್ಷಿಗಳಿದೆಯೇ, ಸೂತ್ರವಿಲ್ಲದ ಗಾಳಿಪಟ ಬಿಡಬಾರದು ಎಂದು ಕೆಂಡಮಂಡಲವಾಗಿ ಹೇಳಿದರು.