ರಾಜಕೀಯ

ದೇಶದ ಕೆಲವೇ ಉದ್ದಿಮೆದಾರರಿಗೆ ಮಾತ್ರ ಅಚ್ಚೇದಿನ್: ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ದೇಶವನ್ನು ಸ್ವರ್ಗ ಮಾಡುವ ಭ್ರಮೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಮೋದಿ ಸರ್ಕಾರ ರೈತರಿಗೆ, ಯುವಕರಿಗೆ ಮಂಕು ಬೂದಿ ಎರಚಿ, ದಾರಿ ತಪ್ಪಿಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ತೀವ್ರವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಪ್ರಧಾನಿಯಾಗಿ 7 ವರ್ಷ ಕಳೆದಿದ್ದರು. ಜನರಿಗೆ ಅಚ್ಚೇ ದಿನ್ ಬರಲಿಲ್ಲ, ಬದಲಾಗಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಪಾಲಿಗೆ ಬಹಳ ಕೆಟ್ಟ ದಿನಗಳು ಬಂದಿವೆ. ಆದರೆ ದೇಶದ ಕೆಲವೇ ಕೆಲವು ಉದ್ದಿಮೆದಾರರಿಗೆ ಅಚ್ಚೇದಿನ್ ಬಂದಿದೆ ಎಂದು ಮೂದಲಿಸಿದರು.

ದೇಶವನ್ನು ಅಭಿವೃದ್ಧಿ ಮಾಡುವ ನೆಪದಲ್ಲಿ ಮೋದಿ ಸರಕಾರ ಆಸ್ತಿಗಳನ್ನು ಖಾಸಗಿಯವರಿಗೆ ಮನಬಂದಂತೆ ಮಾರಾಟ ಮಾಡಲು ಮುಂದಾಗಿದೆ ಎಂದು ಸಿದ್ದರಾಮಯ್ಯ ತೀವ್ರ ಅಸಮಾಧಾನ ಹೊರಹಾಕಿದರು.

ಅಚ್ಚೇ ದಿನ್ ಬರುತ್ತೆ ಎಂದು ಜನರಲ್ಲಿ ಆಶಾ ಗೋಪುರ ಕಟ್ಟಿ ದೇಶ ಭಕ್ತಿ, ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ದಾರಿ ತಪ್ಪಿಸಿದರು. ಬಿಜೆಪಿ ಎಂದೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಅವರಿಗೆ ದೇಶ ಭಕ್ತಿ ಕೊರತೆ ಇದೆ ಎಂದರು.

ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿ 224 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಆದರೆ ನಾನು ಯಾರಿಗೂ ಪಕ್ಷಕ್ಕೆ ಆಹ್ವಾನ ನೀಡಿಲ್ಲ. ಜಿಟಿ ದೇವೇಗೌಡ ಮಾತ್ರ ಸಂಪರ್ಕ ಮಾಡಿ ಮಾತುಕತೆ ಮಾಡಿದ್ದಾರೆ ಎಂದು ಹೇಳಿದರು.

SCROLL FOR NEXT