ರಾಜಕೀಯ

ಪಾಲಿಕೆ ಚುನಾವಣೆ ಮೂಲಕ ಕಲ್ಯಾಣ ಕರ್ನಾಟಕ ಭಾಗದಿಂದಲೇ ಬಿಜೆಪಿಯ ಅವನತಿ ಪ್ರಾರಂಭ: ಈಶ್ವರ್‌ ಖಂಡ್ರೆ

Manjula VN

ಕಲಬುರಗಿ: ಪಾಲಿಕೆ ಚುನಾವಣೆ ಮೂಲಕವೇ ಬಿಜೆಪಿಯ ಅವನತಿ ಶುರುವಾಗುತ್ತೆ. ಕಲ್ಯಾಣ ಕರ್ನಾಟಕ ಭಾಗದಿಂದಲೇ ಬಿಜೆಪಿಯ ಅವನತಿ ಆರಂಭವಾಗುತ್ತೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಧರ್ಮಗಳನ್ನು ಒಡೆದು ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಬ್ರಿಟಿಷರಂತೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿಯವರು ನಕಲಿ ರಾಷ್ಟ್ರೀಯವಾದಿಗಳು. ಅವರಿಂದ ಕಾಂಗ್ರೆಸ್ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗಲಿದೆ. ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸೀಟ್‌ಗಳನ್ನು ಗೆದ್ದು ಸ್ವತಂತ್ರವಾಗಿ ಆಡಳಿತ ಮಾಡಲಿದೆ ಎಂದು ಹೇಳಿದ್ದಾರೆ.

ಎಲ್ಲಿ ಅಧಿಕಾರ ಸಿಗುತ್ತೋ ಆ ಕಡೆ ಜೆಡಿಎಸ್‌ನವರು ಹೋಗುತ್ತಿದ್ದಾರೆ. ಜೆಡಿಎಸ್ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಇನ್ನು, ಎಐಎಂಐಎಂ ಬಿಜೆಪಿಯ ಬಿ ಟೀಂ ಆಗಿದೆ. ಬಿಜೆಪಿ ಯವರು ಜಿಡಿಪಿ ಹೆಚ್ಚಾಗಿದೆ ಅಂತಿದ್ದಾರೆ. ಮಲ್ಲಿಕಾರ್ಜುನ ‌ಖರ್ಗೆ ಮತ್ತು ಧರಂಸಿಂಗ್ ಈ ಭಾಗಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಜಾತ್ಯಾತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ಜಾತಿ ರಾಜಕಾರಣ ಮಾಡುತ್ತಿದೆ. 

ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್. ಆದರೆ, ಬಿಜೆಪಿ ಸರ್ಕಾರ ತನ್ನ ಸಾಧನೆ ಅಂತಾ ಚುನಾವಣೆ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದೆ. ಸ್ವರ್ಗವನ್ನೇ ಧರೆಗೆ ತರುತ್ತೇವೆ ಅಂತಾ ಹೇಳಿದ್ದ ಬಿಜೆಪಿ ಇದೀಗ ನರಕವನ್ನೇ ಸೃಷ್ಟಿಸಿದೆ. ನಮಗೆ ಮತ ನೀಡಿ ಎಂದು ಜನರನ್ನು ಕೇಳುವ ನೈತಿಕ ಹಕ್ಕು ಬಿಜೆಪಿಗಿಲ್ಲ. ಕೋವಿಡ್-19 ಹೆಸರಿನಲ್ಲಿ ಬಿಜೆಪಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಹಲವು ಇಲಾಖೆಗಳ ಹುದ್ದೆ ನೇಮಕಾತಿ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಜಿಡಿಪಿ ಅಂದ್ರೆ, ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳ ಆಗಿದೆ. ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.

ಕಲಬುರಗಿ ಪಾಲಿಕೆ ಚುನಾವಣೆ ಮೂಲಕವೇ ಬಿಜೆಪಿಯ ಅವನತಿ ಶುರುವಾಗುತ್ತೆ. ಕಲ್ಯಾಣ ಕರ್ನಾಟಕ ಭಾಗದಿಂದಲೇ ಬಿಜೆಪಿಯ ಅವನತಿ ಆರಂಭವಾಗುತ್ತದೆ ಎಂದು ಈಶ್ವರ್ ಖಂಡ್ರೆ ಹರಿಹಾಯ್ದಿದ್ದಾರೆ.

ಸೆಪ್ಟೆಂಬರ್‌ 3 ರಂದು ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 6 ರಂದು ಫಲಿತಾಂಶ ಹೊರಬೀಳಲಿದೆ. 

ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಕೂಡ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಕುತೂಹಲ ಹೆಚ್ಚಿಸಿದೆ.

SCROLL FOR NEXT