ರಾಜಕೀಯ

ಸಾಮೂಹಿಕ ನಾಯಕತ್ವದಲ್ಲೇ ಬಿಜೆಪಿ 2023ರ ಚುನಾವಣೆ ಎದುರಿಸಲಿದೆ: ಕೆ.ಎಸ್.ಈಶ್ವರಪ್ಪ

Manjula VN

ಶಿವಮೊಗ್ಗ: ಅಮಿತ್ ಶಾ ಅವರ ಒಂದು ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎನ್ನುವ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ರಾಜ್ಯ ಬಿಜೆಪಿಯಲ್ಲಿ ಆಕ್ಷೇಪದ ಕೂಗು ಎದ್ದಿದೆ. ಈ ಆಕ್ಷೇಪದ ಕೂಗಿಗೆ ಇದೀಗ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ದನಿಗೂಡಿಸಿದ್ದಾರೆ. 

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಅಮಿತ್ ಶಾ ಹೇಳಿದ್ದಾರೆ ಹೌದು, ಯಾವ ರೀತಿ ಹೇಳಿದ್ದಾರೆ ಗೊತ್ತಿಲ್ಲ.  ಸಾಮೂಹಿಕ ನಾಯಕತ್ವದ ಬಗ್ಗೆ ಖಂಡಿತಾ ನಮ್ಮೆಲ್ಲರ ಒಲವಿದೆ. ಎಲ್ಲರೂ ಕೂತು ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ. 

ಸಾಮೂಹಿಕ ನಾಯಕತ್ವದಲ್ಲಿ ಬೊಮ್ಮಾಯಿಯವರ ಪಾತ್ರವೂ ಇರುತ್ತದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಂಘಟನೆ ಕಟ್ಟುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದೇವೆ. ಏನೇ ಆದರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದ್ದಾರೆ. 

ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿಯಲ್ಲಿ ಚುನಾವಣೆ ನಡೆಯುತ್ತಿದೆ. ನಾನು ಕೂಡ ಆ ಭಾಗಕ್ಕೆ ಹೋಗಿ ಬಂದಿದ್ದೇನೆ. ಅಲ್ಲಿಯ ಜನತೆ ಬಿಜೆಪಿಯ ಜೊತೆಗೆ ಇದ್ದಾರೆ. ಕಾರ್ಯಕರ್ತರು ತುಂಬಾ ಉತ್ಸಾಹದಲ್ಲಿ ಕೆಲಸ ಮಾಡಿದ್ದಾರೆ. ಮೂರು ಮಹಾನಗರ ಪಾಲಿಕೆಯಲ್ಲಿ ಪೂರ್ಣ ಬಹುಮತವನ್ನು ಬಿಜೆಪಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SCROLL FOR NEXT