ರಾಜಕೀಯ

ಎತ್ತಿನ ಗಾಡಿ ಏರಿ ವಿಧಾನ ಸೌಧಕ್ಕೆ ಕಾಂಗ್ರೆಸ್ ನಾಯಕರ ಪ್ರಯಾಣ: ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ದರ ಇಳಿಕೆಗೆ ಆಗ್ರಹ

Sumana Upadhyaya

ಬೆಂಗಳೂರು: ವಿಧಾನ ಸೌಧದಲ್ಲಿ ಉಭಯ ಸದನಗಳ ಕಲಾಪ ಇನ್ನು ಕೆಲವೇ ಹೊತ್ತಿನಲ್ಲಿ ಆರಂಭವಾಗಲಿದೆ. ಅದರಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯಲ್ಲಿ ಹೊರಟಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ನಾಯಕರು ಎತ್ತಿನ ಗಾಡಿಯನ್ನು ಏರಿ ವಿಧಾನಸೌಧ ಚಲೋ ನಡೆಸುತ್ತಿದ್ದಾರೆ.

ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸರ್ಕಾರದ ಗಮನವನ್ನು ಸೆಳೆಯಲು, ಜನರ ಕಷ್ಟವನ್ನು ತೋರಿಸಲು ಕಾಂಗ್ರೆಸ್ ಈ ರೀತಿ ವಿಶಿಷ್ಟವಾಗಿ ಹೋರಾಟಕ್ಕೆ ಮುಂದಾಗಿದೆ.  ಪೆಟ್ರೋಲ್-ಡೀಸೆಲ್ ಬೆಲೆಯನ್ನು 25 ರೂಪಾಯಿಗಳಷ್ಟು, ಅಡುಗೆ ಅನಿಲ ಬೆಲೆಯನ್ನು 150 ರೂಪಾಯಿಯಷ್ಟು ಕಡಿಮೆ ಮಾಡಬೇಕೆಂದು ಆಗ್ರಹಿಸಿ ಎತ್ತಿನ ಗಾಡಿಯಲ್ಲಿ ವಿಧಾನಸೌಧದತ್ತ ಹೊರಟಿದ್ದಾರೆ. 

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಇದು ಚೊಚ್ಚಲ ಅಧಿವೇಶನವಾಗಿದ್ದು, ಆರಂಭದಲ್ಲಿಯೇ ಪ್ರತಿಭಟನೆಯ ಬಿಸಿ ಎದುರಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಈ ಸರ್ಕಾರ ದರ ಕೆಳಗಿಳಿಸುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ, ಇಂಧನ ದರ 75 ರೂಪಾಯಿಗೆ ಇಳಿಕೆಯಾಗಬೇಕು. ಅಡುಗೆ ಅನಿಲ ಬೆಲೆ 150 ರೂಪಾಯಿ ಇಳಿಕೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಕಾಂಗ್ರೆಸ್‌ನ ಎತ್ತಿನಗಾಡಿ ಚಲೋವಿಧಾನಸೌಧದತ್ತ ತೆರಳಿದೆ. ಕೇವಲ 2 ಎತ್ತಿನ ಗಾಡಿಯಲ್ಲಿ ತೆರಳುವುದಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ಒಂದೇ ಎತ್ತಿನ ಬಂಡಿಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ತೆರಳಿದ್ದಾರೆ. ಆರಂಭದಲ್ಲಿ ನಾಲ್ಕು ಎತ್ತಿನ ಗಾಡಿಯನ್ನು ರಸ್ತೆಗಿಳಿಸಿದ ಕಾರಣ ವಿಂಡ್ಸರ್ ಮ್ಯಾನರ್ ಹೊಟೇಲ್ ಬಳಿ ಪೊಲೀಸರು ತಡೆದು ನಿಲ್ಲಿಸಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

SCROLL FOR NEXT